ಕಲಬುರಗಿ: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತರು ಸರಿಯಾಗಿ ಪೋಷಣೆ ಪಾಲನೆ ಮಾಡುತ್ತಿಲ್ಲ. ಕನ್ನಡ ಭಾಷೆ, ವ್ಯಾಕರಣ, ಛಂದಸ್ಸು, ಕಲಿಯುವುದೆ ಆನಂದದಾಯಕ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಎಸ್ ಉಡಿಕೇರಿ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದ ಮುಂಭಾಗದಲ್ಲಿ 70ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ಕನ್ನಡ ಧ್ವಜಾರೋಹಣ ನೆರವೇರಿಸಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಕನ್ನಡ ಶ್ರೇಷ್ಠ ಬಾಷೆ. ಒಂದು ಭಾಷೆ ವಿಶೇಷ ಸ್ಥಾನ ಹೊಂದಬೇಕೆಂದರೆ ದೊಡ್ಡ ಇತಿಹಾಸವಿರಬೇಕು. ಅದನ್ನ ಕನ್ನಡ ಭಾಷೆ ಹೊಂದಿದೆ. ಹಳೆಗನ್ನಡ ಓದುವುದನ್ನ, ಛಂದಸ್ಸುಗಳನ್ನು ಮರೆತಿದ್ದೇವೆ ಎಂದರು. ನನಗೆ ಹಲವಾರು ಕನ್ನಡ ಶಿಕ್ಷಕರು ಕನ್ನಡ ಕಲಿಸಿದ್ದಾರೆ. ನಾನು ಕನ್ನಡ ಕಲಿತಿರುವುದು ಹೆಮ್ಮೆ ಎನಿಸಿದೆ ಎಂದರು.
ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ. ಹೆಚ್.ಟಿ. ಪೋತೆ ಮಾತನಾಡಿ, 2500 ವರ್ಷಗಳಿಗಿಂತ ಹಳೆಯ ಭಾಷೆ ಕನ್ನಡ. ಇದು ದ್ರಾವಿಡ ಭಾಷೆಗಳಲ್ಲಿ ಒಂದು. ಕನ್ನಡ ಭಾಷೆ ಎನ್ನುವುದು ಬದುಕು ಸಂಸ್ಕೃತಿಯಾಗಿದೆ.
ಅಶೋಕನ ಆಳ್ವಿಕೆ ಅವಧಿಯ ಶಾಸನಗಳಲ್ಲಿ ಕನ್ನಡ ಭಾಷೆ ಕಾಣಬಹುದು ಮತ್ತು 1ನೇ ಶತಮಾನದ ಗ್ರೀಕ್ ನಾಟಕದಲ್ಲಿ ಕನ್ನಡ ಪದಗಳು ಕಂಡು ಬಂದಿವೆ ಆದ್ದರಿಂದ ಕನ್ನಡದ ಹಿರಿತನ ಹಳೆತನವನ್ನ ಅರ್ಥ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಕುಲಸಚಿವ ಪ್ರೊ. ರಮೇಶ್ ಲಂಡನಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಡಾ. ಎನ್. ಜಿ. ಕಣ್ಣೂರು, ವಿತ್ತಾಧಿಕಾರಿ ಶ್ರೀಮತಿ. ಜಯಂಬಿಕಾ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಅಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಂಗೀತ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿ ತಂಡ ಕನ್ನಡಪರ ಗೀತೆ ಪ್ರಸ್ತುತ ಪಡಿಸಿದರು. ದೈಹಿಕ ಶಿಕ್ಷಣ ವಿಭಾಗದ ಪ್ರಾಂಶುಪಾಲ ಡಾ. ಹನುಮಂತ ಜಂಗೆ
ವಂದಿಸಿದರು. ಡಾ. ಎಂ.ಬಿ. ಕಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವರದಿ : ಗಾಯತ್ರಿ ಒಡೆಯರ್
