ಬೆಂಗಳೂರು : ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಜಯನಗರ 1ನೇ ಬ್ಲಾಕ್, ಅಶೋಕ ಪಿಲ್ಲರ್, ಲಾಲ್‌ಬಾಗ್ ಸಿದ್ದಾಪುರ ಗೇಟ್ ಹತ್ತಿರ, ದಿನಾಂಕ:19/11/2025 ರಂದು ಮದ್ಯಾಹ್ನದ ಸಮಯದಲ್ಲಿ ಸಿ.ಎಂ.ಎಸ್ ಕಂಪನಿಯ ವಾಹನವನ್ನು ಅಡ್ಡಗಟ್ಟಿ 7,11,00,000/- ಹಾಗೂ ವಾಹನದಲ್ಲಿದ್ದ ಡಿ.ವಿ.ಆರ್ ದರೋಡೆ ಮಾಡಿಕೊಂಡು ಹೋಗಿದ್ದು, ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ತನಿಖೆಯನ್ನು ಕೈಗೊಂಡ ಪೊಲೀಸರು ದರೋಡೆಗೆ ಸಂಬಂಧಿಸಿದಂತೆ, ದಿನಾಂಕ:21/11/2025 ರಂದು ಮೂವರು ಪ್ರಮುಖ ವ್ಯಕ್ತಿಗಳನ್ನು ವಶಕ್ಕೆ ಪಡೆದು ಅವರಿಂದ ₹ 5 ಕೋಟಿ 76 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿತ್ತು.
ತನಿಖೆಯನ್ನು ಮುಂದುವರೆಸಿ, ದಿನಾಂಕ:23/11/2025 ರಂದು ಆಂಧ್ರಪ್ರದೇಶದ ಹೈದ್ರಾಬಾದ್ ಸಿಟಿಯಲ್ಲಿರುವ ನಾಪಳ್ಳಿ ಮೆಟ್ರೊ ಸ್ಟೇಷನ್ ಬಳಿ ಮೂವರು ವ್ಯಕ್ತಿಗಳನ್ನು ₹54.74,000/-ನಗದು ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು.
ದಿನಾಂಕ:23/11/2025 ರಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ವ್ಯಕ್ತಿಯನ್ನು ಹಲಸೂರು ಲೇಕ್, ಕಮ್ಬಹಳ್ಳಿ, ಬಿ.ಡಿ.ಎ ಫ್ಲಾಟ್ ಬಳಿ 23 ಲಕ್ಷ ನಗದು ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು.
ದಿನಾಂಕ:24/11/2025 ರಂದು ಪ್ರಕರಣದಲ್ಲಿ ಭಾಗಿಯಾಗಿ, ಪೊಲೀಸ್ ವಶದಲ್ಲಿದ್ದ ಓರ್ವ ವ್ಯಕ್ತಿಯು ವಾಸವಿರುವ ಆಂಧ್ರಪ್ರದೇಶದ, ಕುಪ್ಪಂ ನಲ್ಲಿರುವ ಆತನ ವಾಸದ ಮನೆಯಿಂದ ₹ 57 ಲಕ್ಷದ 50 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಯಿತು.
ಅದೇ ದಿನ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ವ್ಯಕ್ತಿಗಳನ್ನು ಸುಮನಹಳ್ಳಿ ಜಂಕ್ಷನ್ ಬಳಿಯಿರುವ ಟೀ ಅಂಗಡಿ ಹತ್ತಿರ * 10,00,000/-ನಗದು ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು.
ತನಿಖೆಯನ್ನು ಮುಂದುವರೆಸಿ, ದಿನಾಂಕ:24/11/2025 ರಂದು ಮೊದಲು ವಶಕ್ಕೆ ಪಡೆದಿದ್ದ ಮೂವರ ಪೈಕಿ ಇಬ್ಬರ ಮನೆಯಿಂದ ಒಟ್ಟು * 20,00,000/- ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿ-ಚಕ್ರ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ಈ ಪ್ರಕರಣದ ಮುಂದುವರೆದ ತನಿಖೆಯಿಂದ, 6 ಆರೋಪಿಗಳನ್ನು ವಶಕ್ಕೆ ಪಡೆದು, ಅವರಿಂದ ₹ 145,00,000/-(ಒಂದು ಕೋಟಿ ನಲವತ್ತೈದು ಲಕ್ಷ ರೂಪಾಯಿ), ವಶಪಡಿಸಿಕೊಳ್ಳಲಾಯಿತು.
ವಶಕ್ಕೆ ಪಡೆದ ಆರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿ, ತನಿಖೆಯ ಸಲುವಾಗಿ ಪೊಲೀಸ್ ಆಭಿರಕ್ಷೆಗೆ ಪಡೆದುಕೊಳ್ಳಲಾಗಿರುತ್ತದೆ. ತನಿಖೆ ಪ್ರಗತಿಯಲ್ಲಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಂತ್ ಕುಮಾರ್ ಸಿಂಗ್, ಐ.ಪಿ.ಎಸ್. ಜಂಟಿ ಪೊಲೀಸ್ ಆಯುಕ್ತರು ಪಶ್ಚಿಮ ಸಿ.ವಂಶಿಕೃಷ್ಣ, ಐ.ಪಿ.ಎಸ್, ಜಂಟಿ ಪೊಲೀಸ್ ಆಯುಕ್ತರು ಅಪರಾಧ ಅಜಯ್ ಹಿಲೋರಿ, ಐ.ಪಿ.ಎಸ್. ದಕ್ಷಿಣ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಲೋಕೇಶ್.ಬಿ ಜಗಲಾಸರ್, ಐ.ಪಿ.ಎಸ್ ಮತ್ತು ಉಪ-ಪೊಲೀಸ್ ಆಯುಕ್ತರು ಅಪರಾಧ ಹರಿಬಾಬು.ಬಿ.ಎಲ್. ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ದಕ್ಷಿಣ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಮತ್ತು ಬೆಂಗಳೂರು ನಗರ, ಸಿಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ : ಮುಬಾರಕ್
