ಹೌದು… ಇದೇ ಮಾರ್ಚ್ 30 ರಂದು ನಡೆಯಬೇಕಿದ್ದ ತೃತೀಯ ಭಾಷಾ ವಿಷಯ ಪರೀಕ್ಷೆಯನ್ನು ದಿನಾಂಕ:31.03.2026ಕ್ಕೆ ಮುಂದೂಡಿಕೆ ಮಾಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಗುರುವಾರ ಆದೇಶ ಹೊರಡಿಸಿದ್ದಾರೆ.
2026 ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ನ್ನು ದಿನಾಂಕ:18.03.2026 ರಿಂದ 02.04.2026ರವರೆಗೆ ನಡೆಸಲು ದಿನಾಂಕ:04.11.2025 ರಂದು ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಅದರಂತೆ ಈಗಾಗಲೇ ಪರೀಕ್ಷೆಯು ಪ್ರಾರಂಭವಾಗಿರುತ್ತದೆ. ಸದರಿ ವೇಳಾಪಟ್ಟಿಯನ್ವಯ ತೃತೀಯ ಭಾಷೆ ಪರೀಕ್ಷೆಯನ್ನು ದಿನಾಂಕ:30.03.2026ರಂದು ನಿಗಧಿಪಡಿಸಲಾಗಿತ್ತು. ಆದರೆ ಅದೇ ದಿನ ಸರ್ಕಾರದ ಆದೇಶದಲ್ಲಿ ಮಹಾವೀರ ಜಯಂತಿ ಪ್ರಯುಕ್ತ ಘೋಷಿಸಲಾಗಿರುವ ಸಾರ್ವತ್ರಿಕ ರಜಾ ದಿನವನ್ನು ದಿನಾಂಕ:31.03.2026ರ ಮಂಗಳವಾರ ಬದಲಾಗಿ ದಿನಾಂಕ:30.03.2026ರ ಸೋಮವಾರ ಎಂದು ಮಾರ್ಪಡಿಸಿ ಆದೇಶಿಸಲಾಗಿದೆ.
ಆದ್ದರಿಂದ ದಿನಾಂಕ:30.03.2026 ರಂದು ನಿಗಧಿಪಡಿಸಲಾಗಿದ್ದ ತೃತೀಯ ಭಾಷೆ ವಿಷಯದ ಪರೀಕ್ಷೆಯನ್ನು ದಿನಾಂಕ:31.03.2026ರ ಮಂಗಳವಾರ ಈಗಾಗಲೇ ನಿಗಧಿಪಡಿಸಿರುವ ಅವಧಿಯಲ್ಲಿ ನಡೆಸಲಾಗುವುದು. ಉಳಿದ ವಿಷಯದ ಪರೀಕ್ಷೆಗಳು ವೇಳಾಪಟ್ಟಿಯಂತೆ ಯಥಾವತ್ತಾಗಿ ನಡೆಯುತ್ತವೆ ಎಂದು ಆದೇಶದ ಮೂಲಕ ತಿಳಿಸಿದ್ದಾರೆ.
