ಬೆಂಗಳೂರು:
ಮನೆಗೆಲಸಕ್ಕೆ ಸೇರಿಕೊಂಡು ಮಾಲೀಕರ ನಂಬಿಕೆ ದ್ರೋಹ ಮಾಡಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಮಹಿಳೆ ಮತ್ತು ಕಾನೂನು ಸಂಘರ್ಷಕ್ಕೊಳಗಾದ ಅಪ್ರಾಪ್ತ ಬಾಲಕಿಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 63 ಗ್ರಾಂ ಚಿನ್ನದ ನಾಣ್ಯ/ಆಭರಣಗಳು ಮತ್ತು ₹5 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಒಟ್ಟು ಸ್ವತ್ತಿನ ಮೌಲ್ಯ ಸುಮಾರು ₹8.80 ಲಕ್ಷ ಎಂದು ಅಂದಾಜಿಸಲಾಗಿದೆ.
ಘಟನೆಯ ಹಿನ್ನೆಲೆ:
ಬಸವನಗುಡಿಯ ಡಾ. ಉಮ್ಮರ್ ಶರೀಫ್ ರಸ್ತೆಯ ನಿವಾಸಿಯೊಬ್ಬರು ಮೇ 25, 2026 ರಂದು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರುದಾರರ ತಾಯಿ ಸುಮಾರು 4 ತಿಂಗಳ ಹಿಂದೆ 4 ಗ್ರಾಂ ತೂಕದ 25 ಚಿನ್ನದ ನಾಣ್ಯಗಳನ್ನು (ಒಟ್ಟು 100 ಗ್ರಾಂ) ಹಾಗೂ ₹5 ಲಕ್ಷ ನಗದನ್ನು ಮನೆಯ ವಾರ್ಡ್‌ರೋಬ್‌ನಲ್ಲಿಟ್ಟಿದ್ದರು. ಏಪ್ರಿಲ್ 30ರಂದು ಪರಿಶೀಲಿಸಿದಾಗ ಚಿನ್ನ ಹಾಗೂ ನಗದು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮತ್ತು ಆಕೆಯ ಮಗಳು ಸೇರಿ ಈ ಕಳವು ಮಾಡಿರಬಹುದು ಎಂದು ದೂರಿನಲ್ಲಿ ಶಂಕೆ ವ್ಯಕ್ತಪಡಿಸಲಾಗಿತ್ತು.
*ಸರಣಿ ತನಿಖೆ ಮತ್ತು ಬಂಧನ:*
ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೆತ್ತಿಕೊಂಡ ಬಸವನಗುಡಿ ಪೊಲೀಸರು ಮೇ 26ರಂದು ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆ ತನ್ನ ಜೊತೆ ಕೆಲಸಕ್ಕಿದ್ದ ಅಪ್ರಾಪ್ತ ಬಾಲಕಿಯೊಂದಿಗೆ ಸೇರಿ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ಮೇ 27ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 8 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿತ್ತು.
ಜೂನ್ 1ರಂದು ಅಪ್ರಾಪ್ತ ಬಾಲಕಿಯನ್ನು ಆಕೆಯ ಪೋಷಕರ ಸಮ್ಮುಖದಲ್ಲಿ ವಿಚಾರಣೆ ನಡೆಸಿದಾಗ, ಆಕೆಯೂ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ಬಳಿಕ ಬಾಲಕಿಯನ್ನು ಮಕ್ಕಳ ರಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಆಪ್ತ ಸಮಾಲೋಚನೆ ನಡೆಸಿ ಪೋಷಕರಿಗೆ ಒಪ್ಪಿಸಲಾಗಿದೆ.
ಕಳವು ಮಾಲು ವಶಪಡಿಸಿಕೊಂಡ ವಿವರ:
ಜೂನ್ 1:* ಬಾಲಕಿ ನೀಡಿದ ಮಾಹಿತಿ ಮೇರೆಗೆ ಆಕೆಯ ಮನೆಯಿಂದ 24 ಗ್ರಾಂ ಚಿನ್ನದ ಕಾಯಿನ್ ಹಾಗೂ ₹2.5 ಲಕ್ಷ ನಗದು ವಶಪಡಿಸಿಕೊಳ್ಳಲಾಯಿತು.
ಆರೋಪಿ ಮಹಿಳೆಯು ತಾನು ಕಳವು ಮಾಡಿದ್ದ ಚಿನ್ನದ ನಾಣ್ಯಗಳನ್ನು ಮಂಡ್ಯದ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಕರಗಿಸಿ, ಬೇರೆ ಆಭರಣಗಳನ್ನು ಮಾಡಿಸಿ ತನ್ನ ಸಹೋದರನ ಮನೆಯಲ್ಲಿಟ್ಟಿದ್ದಳು. ಪೊಲೀಸರು ಆಕೆಯ ಸಹೋದರನಿಂದ 39 ಗ್ರಾಂ ಚಿನ್ನದ ಆಭರಣ ಹಾಗೂ ₹2.5 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಒಟ್ಟಾರೆ 63 ಗ್ರಾಂ ಚಿನ್ನ ಹಾಗೂ ₹5,00,000 ನಗದು ಪತ್ತೆಯಾಗಿದೆ. ಜೂನ್ 1ರಂದು ಮಹಿಳಾ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ಪೊಲೀಸ್ ತಂಡಕ್ಕೆ ಶ್ಲಾಘನೆ:
ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ (DCP) ಡಾ. ಕೋನ ವಂಶಿಕೃಷ್ಣ (IPS) ಹಾಗೂ ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ (ACP) ಶ್ರೀ ಲಕ್ಷ್ಮೀನಾರಾಯಣ ಅವರ ಮಾರ್ಗದರ್ಶನದಲ್ಲಿ, ಬಸವನಗುಡಿ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಅಮರೇಶ್ ಬಿ. ಹೊಗರ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಯಶಸ್ವಿಯಾಗಿ ಈ ಪ್ರಕರಣವನ್ನು ಭೇದಿಸಿದೆ. ಪೊಲೀಸ್ ತಂಡದ ಈ ಕಾರ್ಯಕ್ಷಮತೆಗೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವರದಿ : ಮುಬಾರಕ್ ಎಸ್
