ಔರಾದ್ : ಗೊಂಡ್ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಮುಂಬರುವ ಅವಧಿಗೆ ನೂತನ ಅಧ್ಯಕ್ಷರನ್ನಾಗಿ ಜೆಸ್ಕಾಂ ಅಧಿಕಾರಿ ಗಣಪತಿ ಮೇತ್ರೆ ಅವರನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಗಿದೆ.
ಪಟ್ಟಣದಲ್ಲಿ ಶನಿವಾರ ಜಿಲ್ಲಾಧ್ಯಕ್ಷ ನಿರಂಜಪ್ಪ ಪಾತ್ರೆ ಅವರ ನೇತೃತ್ವದಲ್ಲಿ ನಡೆದ ತಾಲ್ಲೂಕು ಗೊಂಡ್ ನೌಕರರ ಸಭೆಯಲ್ಲಿ ಸರ್ವಾನುಮತದಿಂದ ಗಣಪತಿ ಅವರನ್ನು ಆಯ್ಕೆ ಮಾಡಿ ಸಂಘದ ಜಿಲ್ಲಾಧ್ಯಕ್ಷ ನಿರಂಜಪ್ಪ ಪಾತ್ರೆ ಮಾತನಾಡಿದರು.
ತಾಲ್ಲೂಕು ಸಂಘ ಎನ್ನುವುದು ನಮ್ಮ ಜಿಲ್ಲಾ ಸಂಘಟನೆಯ ಭದ್ರ ಬುನಾದಿ. ಬೇರು ಗಟ್ಟಿಯಾಗಿದ್ದರೆ ಮಾತ್ರ ಮರ ಬಲಿಷ್ಠವಾಗಿರಲು ಸಾಧ್ಯ. ಇಂದು ತಾಲ್ಲೂಕಿನ ಎಲ್ಲಾ ನೌಕರರು ನಿಮ್ಮ ಮೇಲೆ ಅಪಾರ ನಂಬಿಕೆ ಇಟ್ಟು ಈ ಜವಾಬ್ದಾರಿಯನ್ನು ನೀಡಿದ್ದಾರೆ. ಅಧಿಕಾರ ಎನ್ನುವುದು ಕೇವಲ ಸ್ಥಾನವಲ್ಲ, ಅದು ನೌಕರರ ಹಿತರಕ್ಷಣೆಗಾಗಿ ನಮಗೆ ಸಿಕ್ಕಿರುವ ದೊಡ್ಡ ಜವಾಬ್ದಾರಿಯಾಗಿದೆ.
ಸಂಘಟನೆಯಲ್ಲಿ ಪ್ರತಿಯೊಬ್ಬರನ್ನೂ ಒಳಗೊಳ್ಳಿ. ಯಾರನ್ನೂ ದೂರ ಇಡಬೇಡಿ. ಎಲ್ಲ ಇಲಾಖೆಗಳ ನೌಕರರನ್ನು ಒಟ್ಟಾಗಿ ಕರೆದೊಯ್ಯಿರಿ. ನಿಮ್ಮ ಇಡೀ ತಂಡಕ್ಕೆ ಜಿಲ್ಲಾ ಸಂಘದ ಸಂಪೂರ್ಣ ಬೆಂಬಲ ಯಾವಾಗಲೂ ಇರುತ್ತದೆ. ತಾಲ್ಲೂಕಿನಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿ ಎಂದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಗಣಪತಿ ಮೇತ್ರೆ ಮಾತನಾಡಿ, ಸಂಘವು ಮುಂಬರುವ ದಿನಗಳಲ್ಲಿ ಎಲ್ಲಾ ಇಲಾಖೆಗಳ ನೌಕರರನ್ನು ಒಗ್ಗಟ್ಟಾಗಿ ಕರೆದೊಯ್ಯುವ ಮೂಲಕ ತಾಲ್ಲೂಕು ಸಂಘವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಹಿರಿಯರಾದ ಪ್ರೇಮಶೇಖರ್ ನಾಗಮೂರ್ತಿ, ಸಹ ಕಾರ್ಯದರ್ಶಿ ಶಿವಕುಮಾರ ಕುಪ್ಪೆ, ದಿಗಂಬರ್ ಮೇತ್ರೆ, ಪ್ರಭು ಬಾಳೂರೆ, ಬಂಡೆಪ್ಪ ಕೋಟೆ, ಸಂಜಯ ಮೇತ್ರೆ, ಬಾಲಾಜಿ ಚಂದಾಪೂರೆ, ಸಂದೀಪ ಮೇತ್ರೆ, ಹಣಮಂತ ಮೇತ್ರೆ, ಸೂರ್ಯಕಾಂತ ದೇವಗೊಂಡ್, ರಾಮಗೊಂಡ್ ನಾಗನಪಲ್ಲಿ, ಬಾಲಾಜಿ ಅಮರವಾಡಿ, ದತ್ತು ಬೋರಾಳ ಸೇರಿದಂತೆ ಇನ್ನಿತರರಿದ್ದರು.
ವರದಿ : ರಾಚಯ್ಯ ಸ್ವಾಮಿ
