ಸಹಕಾರ ಕ್ಷೇತ್ರವು ಸಾಮಾನ್ಯ ಜನರ ಆರ್ಥಿಕ ಸಬಲೀಕರಣದ ಪ್ರಮುಖ ಶಕ್ತಿ: ಬಸವರಾಜ ಮೇಲಿನಮನಿ
ಹುಣಸಗಿ: ಪಟ್ಟಣದ ಹುಣಸಗಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯಾಲಯದಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಧ್ವಜಾರೋಹಣವನ್ನು ಸಹಕಾರ ಭಾರತಿ ಜಿಲ್ಲಾಧ್ಯಕ್ಷರು ಹಾಗೂ ಸಂಘದ ಅಧ್ಯಕ್ಷರಾದ ಬಸವರಾಜ ಮೇಲಿನಮನಿ ನೆರವೇರಿಸಿದರು.
ನಂತರ ಮಾತನಾಡಿದ ಅವರು, ದೇಶದ ಸಹಕಾರ ಚಳವಳಿಯು ಕರ್ನಾಟಕದ ಗದಗ ಜಿಲ್ಲೆಯ ಕಣಗಿನಾಳ ಗ್ರಾಮದಿಂದ ಆರಂಭಗೊಂಡಿದ್ದು, ಇಂದಿಗೂ ನಮಗೆ ಆದರ್ಶಪ್ರಾಯವಾಗಿದೆ. ಸಹಕಾರ ಕ್ಷೇತ್ರದ ಬಲವರ್ಧನೆಯಿಂದ ಸಾಮಾನ್ಯ ಜನರು ಹಾಗೂ ರೈತರಿಗೆ ಆರ್ಥಿಕ ಅನುಕೂಲತೆ ದೊರೆಯುವುದರ ಜೊತೆಗೆ ಉದ್ಯೋಗಾವಕಾಶಗಳೂ ಸೃಷ್ಟಿಯಾಗಿವೆ ಎಂದು ಹೇಳಿದರು.
ಸಹಕಾರ ಧ್ವಜದ ಏಳು ಬಣ್ಣಗಳು ಏಕತೆ, ಸಮಾನತೆ, ಶಾಂತಿ, ವಿಶ್ವಾಸ, ಬೆಳವಣಿಗೆ, ಭರವಸೆ ಹಾಗೂ ಮಾನವೀಯ ಮೌಲ್ಯಗಳ ಸಂದೇಶವನ್ನು ಸಾರುತ್ತವೆ. ಸಹಕಾರವೆಂದರೆ ಕೇವಲ ಆರ್ಥಿಕ ವ್ಯವಹಾರವಲ್ಲ; ಅದು ಪರಸ್ಪರ ನಂಬಿಕೆ, ಒಗ್ಗಟ್ಟು, ಸಹಾಯ ಮತ್ತು ಸಾಮೂಹಿಕ ಅಭಿವೃದ್ಧಿಯ ಪ್ರತೀಕವಾಗಿದೆ. ಸಹಕಾರ ಸಂಘಗಳು ಗ್ರಾಮೀಣ ಜನರ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ರೈತರು, ಸಣ್ಣ ವ್ಯಾಪಾರಿಗಳು ಹಾಗೂ ಸಾಮಾನ್ಯ ಜನರ ಆರ್ಥಿಕ ಸಬಲೀಕರಣಕ್ಕೆ ಅಪಾರ ಕೊಡುಗೆ ನೀಡುತ್ತಿವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರದ ಮಹತ್ವವನ್ನು ಅರಿತು ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಸ್ಥಾಪಿಸಿರುವುದು ಈ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿದೆ. ಸಹಕಾರ ಸಪ್ತಾಹದ ಮೊದಲ ದಿನದ ವಿಷಯವಾದ ಸುಸ್ಥಿರ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಕುರಿತು ಮಾತನಾಡಿ, ಯುವಕರು ಮತ್ತು ಮಹಿಳೆಯರು ಸಹಕಾರದ ಮೂಲಕ ಸಮೃದ್ಧಿ ಸಾಧಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಹಕಾರ ಪಿತಾಮಹ ಎಸ್.ಎಸ್. ಪಾಟೀಲ ಕಣಗಿನಾಳ ಅವರಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಸಹಕಾರ ಭಾರತಿ ಜಿಲ್ಲಾ ಮಹಿಳಾ ಪ್ರಮುಖರಾದ ವಿಜಯಲಕ್ಷ್ಮಿ ಪರಶು ದೇಸಾಯಿ, ಸಹ ಪ್ರಮುಖರಾದ ಪದ್ಮಾವತಿ ಕುಲಕರ್ಣಿ, ತಾಲೂಕು ಪ್ರಮುಖರಾದ ಲಲಿತಾ ನೀಲಕಂಠ ವೈಲಿ, ಅನಿತಾ ಬಳಿ ಹಾಗೂ ನಾಗರತ್ನಾ ಹುಲಕಲ್ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷರಾದ ಶಾಂತಗೌಡ ಅರಕೇರಿ, ಚಂದ್ರಶೇಖರ ದೇಸಾಯಿ, ಗುರು ಹುಲಕಲ್, ನೀಲಕಂಠ ಹೊನಕಲ್, ಪರಶಿವಪ್ಪ ದೇಸಾಯಿ ಹಾಗೂ ನೀಲಕಂಠ ಚಿಂಚೋಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸಂಘದ ಲೆಕ್ಕಿಗ ಪ್ರಭು ನೂಲಿನ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರನ್ನೂ ಸ್ವಾಗತಿಸಿದರು.
