ರಾಯಬಾಗದಲ್ಲಿ ಸಂವಿಧಾನ ಜಾಗೃತಿ ಸಮಾವೇಶಕ್ಕೆ ಭವ್ಯ ಚಾಲನೆ

ರಾಯಬಾಗ, ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ರಕ್ಷಣೆಗಾಗಿ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಚಿಕ್ಕೋಡಿ ಜಿಲ್ಲಾ ಮಟ್ಟದ ಸಂವಿಧಾನ ಜಾಗೃತಿ ಸಮಾವೇಶ ಭಾನುವಾರ ರಾಯಬಾಗದಲ್ಲಿ ನಡೆಯಿತು.

ದಲಿತ ಸಂಘರ್ಷ ಸಮಿತಿ ಭೀಮಮಾರ್ಗ (ರಿ) ವತಿಯಿಂದ ಸಮಾವೇಶಕ್ಕೂ ಮುನ್ನ ರಾಯಬಾಗ ನಗರದ ಪ್ರವಾಸಿ ಮಂದಿರದಿಂದ ತಾಲೂಕು ಪಂಚಾಯತ್ ಬಾಬು ಜಗಜೀವನರಾವ್ ಭವನದವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು, ಜೈ ಭೀಮ್ ಘೋಷಣೆ ಕೂಗುತ್ತಾ ಸಾಗಿದರು.

ಮೆರವಣಿಗೆ ಬಾಬು ಜಗಜೀವನರಾವ್ ಭವನ ತಲುಪಿದ ನಂತರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಜ್ಯೋತಿ ಬೆಳಗಿಸಿ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ನಂತರ ಎಲ್ಲರೂ ಒಟ್ಟಾಗಿ ಸಂವಿಧಾನ ಪೀಠಿಕೆ ಓದುವ ಮೂಲಕ ಸಂವಿಧಾನದ ಮೌಲ್ಯಗಳನ್ನು ಪಾಲಿಸುವ ಪ್ರತಿಜ್ಞೆ ಮಾಡಿದರು.

ರಾಜ್ಯ ಸಂಚಾಲಕ ಡಾ. ಬಿ.ಎಸ್. ವೆಂಕಟೇಶ್ ಫೋಟೋ ಪೂಜೆ ನೆರವೇರಿಸಿದರು. ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಸಿದ್ಧಾರ್ಥ ರಾ. ಸಿಂಗೆ ಜ್ಯೋತಿ ಬೆಳಗಿಸಿದರು. ಚಿಕ್ಕೋಡಿ ಜಿಲ್ಲಾ ಸಂಚಾಲಕ ಪರಶುರಾಮ ಟೋಣೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಘಟನಾ ಸಂಚಾಲಕ ಸಂಜೀವ ಕಾಂಬಳೆ ಪ್ರಾಸ್ತಾವಿಕ ನುಡಿ ನೀಡಿದರು ಹಾಗೂ ಮಹಾವಿರ ಮೋಹಿತೆ.

ಮುಖ್ಯ ಅತಿಥಿಗಳಾಗಿ ಅಕ್ಷತಾ ಕೆ.ಸಿ, ಜ್ಞಾನಪ್ಪ ಚಲವಾದಿ, ಮಲ್ಲಿಕಾರ್ಜುನ ಡಿಪ್ಪಿನ್ ಸೇರಿದಂತೆ ಆನಂದ ಅರಬಳ್ಳಿ, ಕೆಂಪಣ್ಣ ಶಿರಹಟ್ಟಿ, ರಾಜು ಶಿರಗಾಂವಿ, ಮಹೇಶ ಕೊರವಿ, ಗಣೇಶ ಕಾಂಬಳೆ, ದಿಲೀಪ ಪಾಲನ್ನವರ ಹಾಗೂ ಮತ್ತಿತರು ಉಪಸ್ಥಿತರಿದ್ದರು.

ಸಮಾವೇಶದಲ್ಲಿ ಮಾತನಾಡಿದ ನಾಯಕರು, ಸಂವಿಧಾನವನ್ನು ಪ್ರತಿಯೊಬ್ಬರು ಓದಬೇಕು, ಅರ್ಥ ಮಾಡಿಕೊಳ್ಳಬೇಕು ಹಾಗೂ ಅದನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊರಬೇಕು ಎಂದು ಕರೆ ನೀಡಿದರು.

error: Content is protected !!