ಅಪ್ರಾಪ್ತ ಬಾಲಕಿ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಲು 1 ಲಕ್ಷ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದ ದೇವನಹಳ್ಳಿ ಠಾಣೆ ಪಿಎಸ್‌ಐ ಜಗದೇವಿ ಭೀಮಾಶಂಕರ್‌

ಸಲೋಟಗಿಗೆ (31) ನಿರೀಕ್ಷಣಾ ಜಾಮೀನು ನೀಡಲು ಲೋಕಾಯುಕ್ತ ವಿಶೇಷ ನ್ಯಾಯಾಲಯ ನಿರಾಕರಿಸಿದೆ.
ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಪಿಎಸ್‌ಐ ಜಗದೇವಿಯು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆ.27ರಂದು ವಜಾಗೊಳಿಸಿ ಲೋಕಾಯುಕ್ತ ನ್ಯಾಯಾಧೀಶರಾದ ಕೆ.ಎಂ ರಾಧಾಕೃಷ್ಣ ಆದೇಶ ಹೊರಡಿಸಿದ್ದಾರೆ.
‘‘ಪೊಕ್ಸೋ ಪ್ರಕರಣದಂತಹ ಸೂಕ್ಷ್ಮ ಪ್ರಕರಣದ ತನಿಖೆ ನಡೆಸಲು ಸಂತ್ರಸ್ತೆಯ ತಾಯಿಯಿಂದ ಲಂಚ ಪಡೆದು ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪಿ ಪಿಎಸ್‌ಐ ನಡೆಯೂ ಅತ್ಯಂತ ಅಮಾನವೀಯ ಹಾಗೂ ಕ್ಷಮಿಸಲು ಸಾಧ್ಯವಾಗದ ಕೃತ್ಯವಾಗಿದೆ.ಸರಕಾರಿ ಅಧಿಕಾರಿಯ ಈ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ’’ ಎಂದು ಆದೇಶದಲ್ಲಿ ಕಟುವಾಗಿ ಟೀಕಿಸಿದ್ದಾರೆ.
ತನಿಖೆಗೂ ಹೆಜ್ಜೆ ಹೆಜ್ಜೆಗೂ ಲಂಚ..!
ದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿವಾಸವಿರುವ ಮಹಿಳೆಯೊಬ್ಬರು ತಮ್ಮ ಅಪ್ರಾಪ್ತ ಮಗಳ ಮೇಲೆ ಜಾನ್ಸ್‌ನ್‌ ಎಂಬುವವನು ಲೈಂಗಿಕದೌರ್ಜನ್ಯ ಎಸಗಿದ್ದ ಸಂಬಂಧ ದೂರು ನೀಡಿದ್ದರು. ಆರೋಪಿ ವಿರುದ್ಧ ಪೊಕ್ಸೋ ಪ್ರಕರಣ ದಾಖಲಾಗಿತ್ತು.ಪ್ರಕರಣ ತನಿಖಾಧಿಕಾರಿಯಾಗಿದ್ದ ಪಿಎಸ್‌ಐ ಪ್ರಕರಣದ ಪ್ರತಿ ಹಂತದಲ್ಲಿಸಂತ್ರಸ್ತೆ ತಾಯಿ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಆರೋಪಿ ಜಾನ್ಸ್‌ನನ್ನು ಕರೆತರಲು ಕಾರು ಬಾಡಿಗೆ ಹಾಗೂ ಇತರೆ ಖರ್ಚುಗಳಿಗೆ 25 ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟು ಪಡೆದಿದ್ದರು.ಇದಾದ ಬಳಿಕ ಪ್ರಕರಣದ ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು 1 ಲಕ್ಷ ರೂ.ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.ಅಂತಿಮವಾಗಿ 75 ಸಾವಿರ ರೂ.ಗಳಿಗೆ ಒಪ್ಪಿಕೊಂಡು ಮುಂಗಡವಾಗಿ 5 ಸಾವಿರ ರೂ.ಲಂಚ ಪಡೆದಿದ್ದರು.
ಸೆ.2ರಂದು ದೂರುದಾರೆಗೆ ಕರೆಮಾಡಿದ್ದ ಪಿಎಸ್‌ಐ ಬಾಕಿ ಲಂಚ 70 ಸಾವಿರ ರೂ.ಗಳನ್ನು ಠಾಣಾ ಬರಹಗಾರ ಹಾಗೂ ಮತ್ತೊಬ್ಬ ಕಾನ್ಸ್‌ಟೆಬಲ್‌ಗೆ ತಲುಪಿಸುವಂತೆ ಒತ್ತಡ ಹೇರಿದ್ದರು.
ಅಧಿಕಾರಿಗಳ ಲಂಚಬೇಡಿಕೆಯಿಂದ ಬೇಸತ್ತ ದೂರುದಾರೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು, ಸೆ.3ರಂದು ಪಿಎಸ್‌ಐ ಜಗದೇವಿ ಪರವಾಗಿ 50 ಸಾವಿರ ರೂ.ಲಂಚ ಸ್ವೀಕರಿಸುತ್ತಿದ್ದ ಠಾಣಾ ಬರಹಗಾರ ಕಾನ್ಸ್‌ಟೆಬಲ್‌ ಅಮರೇಶ್‌ರನ್ನು ಟ್ರ್ಯಾಪ್‌ ಮಾಡಿ ಬಂಧಿಸಿದ್ದರು. ಮತ್ತೊಬ್ಬ ಆರೋಪಿ ಕಾನ್ಸ್‌ಟೆಬಲ್‌ ಮಂಜುನಾಥ್‌ ಹಾಗೂ ಪಿಎಸ್‌ಐ ಜಗದೇವಿ ಪರಾರಿಯಾಗಿದ್ದರು.
ಕಳೆದ 27 ದಿನಗಳಿಂದ ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಪಿಎಸ್‌ಐ ಜಗದೇವಿ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆಹೋಗಿದ್ದರು.
ಕೋನೆಗೆ ನ್ಯಾಯಲಯ ನಿರೀಕ್ಷಣಾ ನಿರಾಕರಿಸಿದೆ.

error: Content is protected !!