ನಿಷೇಧಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ ಕ್ರಿಸ್ಟಲ್ ಹಾಗೂ ಕೊಕೇನ್ನನ್ನು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಗಳಿಬ್ಬರ ಬಂಧನ

490 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟಲ್ ಮತ್ತು 43 ಗ್ರಾಂ ಕೊಕೇನ್ ವಶ. ಒಟ್ಟು ಮೌಲ್ಯ ₹2 ಕೋಟಿ 15 ಲಕ್ಷ.

ದಿನಾಂಕ:08/10/2025 ರಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾಧಿಕಾರಿಯವರಿಗೆ ಬಾತ್ಮೀದಾರರಿಂದ ಖಚಿತ ಮಾಹಿತಿಯೊಂದು ದೊರೆತಿರುತ್ತದೆ. ಮಾಹಿತಿಯಲ್ಲಿ ಎಲೆಕ್ಟ್ರಾನಿಕ್ ಸಿಟಿ 1ನೇ ಹಂತದ ಮಹಾಲಕ್ಷ್ಮಿ ಲೇಔಟ್‌ನೆ ಖಾಲಿ ಜಾಗದಲ್ಲಿ ಓರ್ವ ವ್ಯಕ್ತಿಯು ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ. ಈ ಮಾಹಿತಿಯನ್ನಾಧರಿಸಿ, ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿ, ಬಾತ್ಮೀಧಾರರು ತಿಳಿಸಿದ ಸ್ಥಳಕ್ಕೆ ಧಾವಿಸಿ, ದಾಳಿ ಮಾಡಿ. ಓರ್ವ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು.

ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ನಿಷೇಧಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ ಮತ್ತು ಕೋಕೇನ್ನನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಹಾಗೂ ಈ ಕೃತ್ಯದಲ್ಲಿ ಮತ್ತೋರ್ವ ವಿದೇಶಿ ವ್ಯಕ್ತಿ ಸೇರಿದಂತೆ, ಓರ್ವ ವಿದೇಶಿ ಮಹಿಳೆಯು ಸಹಕರಿಸಿರುವುದಾಗಿ ತಿಳಿಸಿರುತ್ತಾನೆ. ಆತನ ವಶದಲ್ಲಿದ್ದ 490 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟಲ್, 43 ಗ್ರಾಂ ಕೊಕೇನ್, 1 ತೂಕದ ಯಂತ್ರ, 01 ಮೊಬೈಲ್ ಫೋನ್ ಹಾಗೂ 1-ದ್ವಿ-ಚಕ್ರ ವಾಹನ ವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ * 2,15,00,000/-(ಎರಡು ಕೋಟಿ ಹದಿನೈದು ಲಕ್ಷ ರೂಪಾಯಿ).

ತನಿಖೆಯನ್ನು ಮುಂದುವರೆಸಿ, ಆರೋಪಿಯು ನೀಡಿದ ಮಾಹಿತಿಯ ಮೇರೆಗೆ ಈ ಕೃತ್ಯದಲ್ಲಿ ಸಹಕರಿಸಿದ್ದ ವಿದೇಶಿ ಮಹಿಳೆಯನ್ನು ಎಲೆಕ್ಟ್ರಾನಿಕ್ ಸಿಟಿ 1ನೇ ಹಂತದ ಟೆಕ್ ಸಿಟಿ ಲೇಔಟ್‌ನಿಂದ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಮಹಿಳೆಯನ್ನು ವಾರಣೆಗೊಳಪಡಿಸಲಾಗಿ, ಈ ಕೃತ್ಯದಲ್ಲಿ ಸಹಕರಿಸಿರುವುದಾಗಿ ತನ್ನೊಪ್ಪಿಕೊಂಡಿರುತ್ತಾಳೆ. ತಲೆ ಮರೆಸಿಕೊಂಡಿರುವ ಓರ್ವ ವಿದೇಶಿ ವ್ಯಕ್ತಿಯ ಪತ್ತೆ ಕಾರ್ಯ ಮುಂದುವರೆದಿದೆ. ತನಿಖೆ ಪ್ರಗತಿಯಲ್ಲಿದೆ.

ದಿನಾಂಕ:09/10/2025 ರಂದು ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.

ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತರವರಾದ ಎಮ್. ನಾರಾಯಣ ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಉಪ-ವಿಭಾಗದ ಸಹಾಯಕ ಉಪ ಪೊಲೀಸ್ ಆಯುಕ್ತರವರಾದ ಕೆ.ಎಮ್ ಸತೀಶ ರವರ ನೇತೃತ್ವದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ನವೀನ್ ಜಿ.ಎಮ್, ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ವರದಿ : ಮುಬಾರಕ್ ಬೆಂಗಳೂರು

error: Content is protected !!