ವಿಜಯಪುರ : ಯಾರು ಭಾರತವನ್ನು ಪ್ರೀತಿಸುತ್ತಾರೋ ಅವರು ಆರ್‌ಎಸ್‌ಎಸ್ ಪ್ರೀತಿಸುತ್ತಾರೆ ಎಂಬ ಅಭಿಯಾನದ ಅಂಗವಾಗಿ ಈ ಸಂದೇಶವುಳ್ಳ ಪೋಸ್ಟರ್ ಅಂಟಿಸುವ ಕಾರ್ಯಕ್ಕೆ ಬಿಜೆಪಿ ನಗರ ಮಂಡಳ ವತಿಯಿಂದ ಅಧ್ಯಕ್ಷರಾದ ಸಂದೀಪ್ ಪಾಟೀಲ್ (ಝಳಕಿ) ನೇತೃತ್ವದಲ್ಲಿ ವಿಜಯಪುರದ ವಾರ್ಡ್ ನಂ.೭ ರಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.
ಅಭಿಯಾನದಲ್ಲಿ ಪಾಲ್ಗೊಂಡ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಆರ್‌ಎಸ್‌ಎಸ್ ನಿಷೇಧ ಮಾಡುವ ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಬಾಲಿಷತನದಿಂದ ಕೂಡಿದೆ, ಈ ದೇಶದಲ್ಲಿ ಸ್ವತಂತ್ರವಾಗಿ ಮಾತನಾಡುವ, ಸಂಘ-ಸಂಸ್ಥೆಗಳ ಚಟುವಟಿಕೆಗಳನ್ನು ನಡೆಸುವ, ಸಂಘ-ಸಂಸ್ಥೆ ಸ್ಥಾಪಿಸುವ ಅಧಿಕಾರವನ್ನು ಭಾರತೀಯ ಸಂವಿಧಾನ ಕರುಣಿಸಿದೆ, ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಪ್ರಿಯಾಂಕ್ ಖರ್ಗೆ ಸಂಘ ಸಂಸ್ಥೆ ನಿಷೇಧ ಮಾಡಿ ಎಂದು ಹೇಳುವ ಮೂಲಕ ಭಾರತೀಯ ಸಂವಿಧಾನ ನೀಡಿರುವ ಹಕ್ಕುಗಳನ್ನೇ ಕಸಿದುಕೊಳ್ಳಲು ಹೊರಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದಿರುವ ಪ್ರಿಯಾಂಕ್ ಅವರಿಗೆ ಜನರ ನೋವು ಗೊತ್ತಿಲ್ಲ, ಹೀಗಾಗಿಯೇ ಈ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ, ಸಂಘ ಪರಿವಾರದ ಜನಪರ ಕಾರ್ಯವನ್ನು, ದೇಶಭಕ್ತಿಯ ಅದಮ್ಯ ಭಾವನೆಯನ್ನು ಅವರು ಮೊದಲು ತಿಳಿದುಕೊಳ್ಳಲಿ, ಈ ರೀತಿ ಒಂದು ಜನಪರ, ದೇಶಭಕ್ತಿಯ ಸಂಘಟನೆಯ ಮೇಲೆ ಆರೋಪ ಮಾಡಿರುವ ಪ್ರಿಯಾಂಕ್ ಖರ್ಗೆ ಅವರನ್ನು ಕೂಡಲೇ ಸಚಿವ ಸಂಪುಟದಿAದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿ, ಯುವಕರಲ್ಲಿ ದೇಶಭಕ್ತಿಯ ಪವಿತ್ರ ಭಾವ ಬಿತ್ತುವ ಜೊತೆಗೆ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಸ್ವಯಂ ಸೇವಕರು ಸ್ವಯಂಪ್ರೇರಣೆಯಿAದ ಜನರ ನೆರವಿಗೆ ಧಾವಿಸುತ್ತಾರೆ, ಎಲ್ಲಿಯೂ ಪ್ರಚಾರ ಪಡೆದುಕೊಳ್ಳದೇ ನಿಸ್ವಾರ್ಥದಿಂದ ದುಡಿಯುವ ಕೋಟಿ ಕೋಟಿ ಮನಸುಗಳು ಸಂಘ ಪರಿವಾರದಲ್ಲಿವೆ, ಇದನ್ನು ಅರ್ಥೈಸಿಕೊಳ್ಳದ ಪ್ರಿಯಾಂಕ್ ಖರ್ಗೆ ಸಂಘ ಪರಿವಾರ ನಿಷೇಧದ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.
ಆರೆಸ್ಸೆಸ್‌ಗೆ ಬೈದರೆ, ನಿಷೇಧಿಸುವ ಮಾತನಾಡಿದರೆ ಕಾಂಗ್ರೆಸ್ ಹೈಕಮಾಂಡ್ ಸಂತುಷ್ಟವಾಗಿ ಮುಂದೆ ಮುಖ್ಯಮಂತ್ರಿಗೆ ಹುದ್ದೆಗೆ ಅವರನ್ನು ಪ್ರತಿಷ್ಠಾಪಿಸುತ್ತದೆ, ಈ ಕಾರಣಕ್ಕೆ ಅವರು ಆ ರೀತಿ ಮಾತನಾಡುತ್ತಿದ್ದಾರೆ ಎಂದು ಜನರೇ ಮಾತನಾಡಿಕೊಳ್ಳುವಂತಾಗಿದೆ, ಜನರಿಗೂ ಸತ್ಯದ ಅರಿವಿದೆ ಎಂದು ಕಾರಜೋಳ ಹೇಳಿದರು.
ನಗರ ಮಂಡಳ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿ, ಸಂವಿಧಾನದ ಆಶಯವನ್ನು ಜಾರಿಗೊಳಿಸಲು ಸಂಘ ಪರಿವಾರ ಶ್ರಮಿಸುತ್ತಿದೆ, ಸಂಘ ಪರಿವಾರದ ಒಂದೇ ಒಂದು ಸಂವಿಧಾನ ವಿರೋಧಿ ಕಾರ್ಯವನ್ನು ಸಚಿವ ಪ್ರಿಯಾಂಕ್ ಖರ್ಗೆ ಸಾಬೀತುಪಡಿಸಲಿ ನೋಡೋಣ ಎಂದು ಸವಾಲು ಹಾಕಿದರು. ದೇಶಭಕ್ತಿಯೇ ಉಸಿರಾಗಿಸಿಕೊಂಡಿರುವ ಸಂಘಟನೆಯ ಮೇಲೆ ಆರೋಪ ಮಾಡುವ ಮುನ್ನ ಸಂಪೂರ್ಣ ಜ್ಞಾನವನ್ನು ಪ್ರಿಯಾಂಕ್ ಪಡೆದುಕೊಳ್ಳಲಿ, ಇಂತಹ ಟೀಕೆಗಳಿಗೆ ಸಂಘ ಪರಿವಾರ ಹೆದರುವುದಿಲ್ಲ, ವಿಚಲಿತವೂ ಆಗುವುದಿಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಚಂದ್ರಶೇಖರ್ ಕವಟಗಿ, ಶ್ರೀಶೈಲ ಬಿರಾದಾರ, ರಾಹುಲ ಜಾಧವ, ರಾಜಶೇಖರ ಮಗಿಮಠ, ಪಾಪುಸಿಂಗ್ ರಜಪೂತ, ಚಿನ್ನು ಚಿನ್ನುಗುಂಡಿ, ವಿಜಯ ಜೋಶಿ ಸಚಿನ್ ಬೊಂಬಳೆ, ಆನಂದ ಮುಚ್ಛಂಡಿ, ಜಗದೀಶ್ ಮುಚ್ಚಂಡಿ, ಮಂಥನ್ ಗಾಯಕವಾಡ, ನಿಖಿಲ್ ಮ್ಯಾಗೇರಿ, ಹನುಮಂತ ಭಜಂತ್ರಿ, ಅಪ್ಪು ಕುಂಬಾರ್, ಸದಾಶಿವ್ ಪೂಜಾರಿ, ಪ್ರವೀಣ್ ಕಟ್ಟಿಮನಿ, ವಿಕಾಸ ಚವ್ಹಾಣ, ಕಿಶೋರ್ ದೊಕಡೆ, ಅಪ್ಪು ಮಸ್ಕಿ, ಕಿರಣ್ ಮೋರೆ, ದತ್ತಾ ಗೋಲಾಂಡೆ, ರಾಯಪ್ಪ ಹಳ್ಳಿ, ಬಸವರಾಜ್ ರೆಡ್ಡಿ, ಸುಹಾಸ್ ವಲ್ಯಾಪುರ ಉಪಸ್ಥಿತರಿದ್ದರು.
ವರದಿ : ಅಜೀಜ ಪಠಾಣ