ಅಕ್ರಮ ಹಣ ವರ್ಗಾವಣೆ ಕೇಸ್​: 44 ಕಡೆ ಇ.ಡಿ ದಾಳಿ, ₹14.5 ಕೋಟಿ ನಗದು, ಚಿನ್ನಾಭರಣ ಜಪ್ತಿ

ರಾಂಚಿ(ಜಾರ್ಖಂಡ್): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ)ದ ಅಧಿಕಾರಿಗಳು ಜಾರ್ಖಂಡ್​​ ಮತ್ತು ಪಶ್ಚಿಮ ಬಂಗಾಳದ 44 ಸ್ಥಳಗಳ ಮೇಲೆ ದಾಳಿ ಮಾಡಿ ಶೋಧಿಸಿದ್ದಾರೆ. ಆರೋಪಿಗಳಿಂದ 14.5 ಕೋಟಿ ರೂಪಾಯಿ ಮತ್ತು ಭಾರೀ ಮೊತ್ತದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಧನ್ಬಾದ್‌ನ ಪ್ರಮುಖ ಕಲ್ಲಿದ್ದಲು ವ್ಯಾಪಾರಿ ಅನಿಲ್ ಗೋಯಲ್, ಬಿಸಿಸಿಎಲ್‌ನ ಹೊರಗುತ್ತಿಗೆ ನಿರ್ದೇಶಕ ಲಾಲ್‌ಬಾಬು ಸಿಂಗ್ ಮತ್ತು ಅವರ ಸಹೋದರ ಕುಂಭನಾಥ್ ಸಿಂಗ್, ಸಂಜಯ್ ಖೇಮ್ಕಾ ಮತ್ತು ದುಮ್ಕಾದ ಅಮರ್ ಮಂಡಲ್ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇ.ಡಿ ತಂಡ ದಾಳಿ ನಡೆಸಿದೆ.

ಜಾರ್ಖಂಡ್ ಮತ್ತು ಬಂಗಾಳದಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯ ಬಗ್ಗೆ ಇ.ಡಿ ಪ್ರಕಟಣೆ ಬಿಡುಗಡೆ ಮಾಡಿದೆ. ನವೆಂಬರ್ 21 ರಂದು ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನ 44 ಸ್ಥಳಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಸಮಗ್ರ ಮತ್ತು ಸಂಘಟಿತ ಶೋಧ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ತಿಳಿಸಿದೆ.

ಅಕ್ರಮ ಕಲ್ಲಿದ್ದಲು ಗಣಿಗಾರಿಕೆ, ಸಾಗಣೆ, ಸಂಗ್ರಹಣೆ ಮತ್ತು ಮಾರಾಟದಿಂದ ಹೆಚ್ಚಿನ ಪ್ರಮಾಣದ ಅಕ್ರಮ ಆದಾಯಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಶೋಧದ ಸಮಯದಲ್ಲಿ ಸುಮಾರು 14.5 ಕೋಟಿ ನಗದು, ಜೊತೆಗೆ ದೊಡ್ಡ ಪ್ರಮಾಣದ ಚಿನ್ನ/ಬೆಳ್ಳಿ ಮತ್ತು ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಸ್ತಿ ದಾಖಲೆಗಳು, ಡಿಜಿಟಲ್ ಸಾಧನಗಳು ಮತ್ತು ಅಪರಾಧಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಬ್ಯಾಂಕ್ ಖಾತೆ ಮಾಹಿತಿ ಸೇರಿದಂತೆ ಹಲವಾರು ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ಜಾರಿ ನಿರ್ದೇಶನಾಲಯವು ಅಕ್ರಮ ನಗದು ಸಂಗ್ರಹದ ಹಲವಾರು ಸ್ಥಳಗಳನ್ನು ಪತ್ತೆ ಹಚ್ಚಿದೆ. ದೊಡ್ಡ ಪ್ರಮಾಣದ ಅಕ್ರಮ ಹಣಕಾಸು ವಹಿವಾಟಿನ ಪುರಾವೆಗಳನ್ನು ಸಂಗ್ರಹಿಸಲು ಶೋಧ ನಡೆಸಿದೆ. ಸಿಕ್ಕ ಮಾಹಿತಿಯು ಅಕ್ರಮ ಚಟುವಟಿಕೆಗಳ ಜಾಲವನ್ನು ಬಯಲು ಮಾಡಲು ಮತ್ತು ಭಾಗಿಯಾಗಿರುವ ವ್ಯಕ್ತಿಗಳನ್ನು ಗುರುತಿಸಲು ಸಹಾಯ ಮಾಡಿದೆ. ಶೋಧದ ಸಮಯದಲ್ಲಿ ದೊಡ್ಡ ಪ್ರಮಾಣದ ನಗದು, ಅಮೂಲ್ಯ ಲೋಹಗಳು, ಆಸ್ತಿ ದಾಖಲೆಗಳು, ಲೆಡ್ಜರ್‌ಗಳು, ರಿಜಿಸ್ಟರ್‌ಗಳು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

error: Content is protected !!