ಕಾಕ್ರೋಚ್ ಜನತಾ ಪಾರ್ಟಿ ವದಂತಿ ಟೌನ್‌ಹಾಲ್ ಬಳಿ ‘ಮಾನವ ಸರಪಳಿ’ ನಿರ್ಮಾಣಕ್ಕೆ ಅನುಮತಿ ಇಲ್ಲ: ಸಾರ್ವಜನಿಕರಿಗೆ ಬೆಂಗಳೂರು ಪೊಲೀಸ್ ಆಯುಕ್ತರ ಎಚ್ಚರಿಕೆ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ “ಕಾಕ್ರೋಚ್ ಜನತಾ ಪಾರ್ಟಿ ಕರ್ನಾಟಕ” (COCKROACH JANATA PARTY KARNATAKA) ಹೆಸರಿನ ಪೋಸ್ಟರ್‌ಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಮಹತ್ವದ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿದೆ. ಮೇ ೨೪, ೨೦೨೬ ರಂದು ಬೆಂಗಳೂರಿನ ಟೌನ್‌ಹಾಲ್ ಮುಂಭಾಗದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ‘ಶಾಂತಿಯುತ ಮಾನವ ಸರಪಳಿ ನಿರ್ಮಾಣ’ ಕಾರ್ಯಕ್ರಮಕ್ಕೆ ಯಾವುದೇ ಅಧಿಕೃತ ಅನುಮತಿ ನೀಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

“ಯಾವುದೇ ಅನುಮತಿ ಪಡೆದಿಲ್ಲ:ಆಯುಕ್ತರ ಕಚೇರಿ ಸ್ಪಷ್ಟನೆ
​ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಟೌನ್‌ಹಾಲ್ ಮುಂಭಾಗ ಜಮಾಯಿಸುವಂತೆ ಈ ಪೋಸ್ಟರ್‌ನಲ್ಲಿ ಆಹ್ವಾನ ನೀಡಲಾಗಿತ್ತು. ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿ, ಸಂಘಟನೆ ಅಥವಾ ಪಕ್ಷದಿಂದ ಅನುಮತಿ ಕೋರಿ ಅರ್ಜಿ ಸಲ್ಲಿಕೆಯಾಗಿಲ್ಲ. ಅಷ್ಟೇ ಅಲ್ಲದೆ, ಈ ಸ್ಥಳವನ್ನು ಕಾರ್ಯಕ್ರಮಕ್ಕೆ ಬಳಸಿಕೊಳ್ಳುವ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕಚೇರಿಯಿಂದಲೂ ಯಾವುದೇ ಪೂರ್ವಾನುಮತಿ ಪಡೆದಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಹೈಕೋರ್ಟ್ ಆದೇಶದ ಉಲ್ಲಂಘನೆ

​ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ: 5781/2021 (GM-RES-PIL) ದಿನಾಂಕ: 01/08/2022 ರ ಆದೇಶದ ಪ್ರಕಾರ, ಬೆಂಗಳೂರಿನ ‘ಫ್ರೀಡಂಪಾರ್ಕ್’ ಹೊರತುಪಡಿಸಿ ಬೇರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಧರಣಿ, ಪ್ರತಿಭಟನೆ ಅಥವಾ ರ‍್ಯಾಲಿಗಳನ್ನು ನಡೆಸಲು ಅವಕಾಶವಿರುವುದಿಲ್ಲ. ಹೀಗಿದ್ದರೂ ಟೌನ್‌ಹಾಲ್ ಬಳಿ ಜನರನ್ನು ಸೇರಿಸಲು ಮುಂದಾಗುವುದು ನ್ಯಾಯಾಲಯದ ಆದೇಶದ ನೇರ ಉಲ್ಲಂಘನೆಯಾಗುತ್ತದೆ ಎಂದು ಪ್ರಕಟಣೆಯಲ್ಲಿ ನೆನಪಿಸಲಾಗಿದೆ.

ಫೋಸ್ಟರ್ ಫಾರ್ವರ್ಡ್ ಮಾಡದಂತೆ ಸಾರ್ವಜನಿಕರಿಗೆ ಸೂಚನೆ
​ಅದರಂತೆ, ಸಾರ್ವಜನಿಕರು ತಮ್ಮ ಅರಿವಿಗೆ ಬಾರದಂತೆ ಈ ಕುರಿತಾದ ಸಂದೇಶ ಅಥವಾ ಪೋಸ್ಟರ್‌ಗಳನ್ನು ಫೇಸ್‌ಬುಕ್ (Facebook), ವಾಟ್ಸಾಪ್ (Whatsapp), ಇನ್‌ಸ್ಟಾಗ್ರಾಮ್ (Instagram) ಹಾಗೂ ಟ್ವಿಟರ್ (Twitter) ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಬ್ಬರಿಗೆ ಶೇರ್ ಅಥವಾ ಪೋಸ್ಟ್ ಮಾಡಬಾರದು ಎಂದು ಕೋರಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಟೌನ್‌ಹಾಲ್ ಬಳಿ ಸಾರ್ವಜನಿಕರು ಗುಂಪು ಸೇರದಂತೆ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸುದ್ದಿ ಮುಖ್ಯಾಂಶಗಳು (Quick Highlights):

* ​ಮೇ ೨೪ರಂದು ಟೌನ್‌ಹಾಲ್ ಬಳಿ ಹಮ್ಮಿಕೊಳ್ಳಲಾಗಿರುವ ‘ಮಾನವ ಸರಪಳಿ’ಗೆ ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿಯಿಂದ ಅನುಮತಿ ಇಲ್ಲ.
* ​ಫ್ರೀಡಂಪಾರ್ಕ್ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಹೈಕೋರ್ಟ್ ನಿಷೇಧವಿದೆ.
* ​ಈ ಸಂಬಂಧದ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳನ್ನು ಫಾರ್ವರ್ಡ್ ಮಾಡದಂತೆ ಸಾರ್ವಜನಿಕರಲ್ಲಿ ಪೊಲೀಸರ ವಿನಂತಿ.

ವರದಿ : ಮುಬಾರಕ್ ಎಸ್

error: Content is protected !!