ತುಮಕೂರು: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಹವಾಮಾನ ಬದಲಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದೆ. ಪ್ರಮುಖವಾಗಿ ಮಾರಕ ‘ಡೆಂಗ್ಯೂ ಜ್ವರ’ ಸದ್ದಿಲ್ಲದೆ ಹರಡುತ್ತಿದ್ದು, ಸಾರ್ವಜನಿಕರನ್ನು ಆತಂಕಕ್ಕೆ ತಳ್ಳಿದೆ. ನಗರ ಪ್ರದೇಶ ಮಾತ್ರವಲ್ಲದೆ ಹಳ್ಳಿಗಳಲ್ಲೂ ಜ್ವರದ ಪ್ರಕರಣಗಳು ದಿಢೀರ್ ಏರಿಕೆಯಾಗುತ್ತಿವೆ.
ಗಿಜಿಗುಡುತ್ತಿರುವ ಜಿಲ್ಲಾಸ್ಪತ್ರೆ:
ಜ್ವರ, ವಿಪರೀತ ಮೈಕೈ ನೋವು ಹಾಗೂ ತಲೆನೋವಿನಿಂದ ಬಳಲುತ್ತಿರುವ ನೂರಾರು ರೋಗಿಗಳು ಪ್ರತಿದಿನ ತುಮಕೂರು ಜಿಲ್ಲಾ ಕೇಂದ್ರದ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ರಕ್ತ ಪರೀಕ್ಷೆ ಮಾಡಿದಾಗ ಹೆಚ್ಚಿನವರಿಗೆ ಡೆಂಗ್ಯೂ ಇರುವುದು ದೃಢಪಡುತ್ತಿರುವುದು ವೈದ್ಯಕೀಯ ವಲಯದಲ್ಲೂ ಆತಂಕ ಮೂಡಿಸಿದೆ. ಪ್ರಮುಖವಾಗಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು ಈ ಜ್ವರಕ್ಕೆ ತುತ್ತಾಗುತ್ತಿದ್ದಾರೆ.
ಸೊಳ್ಳೆಗಳ ಕಾಟಕ್ಕೆ ಜನ ಹೈರಾಣು:
ಹಲವು ವಾರ್ಡ್‌ಗಳಲ್ಲಿ ಚರಂಡಿಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸದಿರುವುದು ಮತ್ತು ಖಾಲಿ ಜಾಗಗಳಲ್ಲಿ ಮಳೆನೀರು ನಿಂತಿರುವುದು ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ನಿಂತ ನೀರೇ ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗುತ್ತಿದ್ದು, ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ. ತಕ್ಷಣವೇ ಎಲ್ಲಾ ಏರಿಯಾಗಳಲ್ಲಿ ಸೊಳ್ಳೆ ನಾಶಕ ಔಷಧಿ (ಫಾಗಿಂಗ್) ಸಿಂಪಡಿಸುವಂತೆ ಸಾರ್ವಜನಿಕರು ಮಹಾನಗರ ಪಾಲಿಕೆಗೆ ಒತ್ತಾಯಿಸಿದ್ದಾರೆ.
ಈ ಲಕ್ಷಣಗಳಿದ್ದರೆ ಎಚ್ಚರ ವಹಿಸಿ:
* ತೀವ್ರ ಜ್ವರ ಮತ್ತು ಕೀಲು ನೋವು.
* ಕಣ್ಣುಗಳ ಹಿಂಭಾಗ ವಿಪರೀತ ನೋವು ಕಾಣಿಸಿಕೊಳ್ಳುವುದು.
* ಅತಿಯಾದ ಸುಸ್ತು ಮತ್ತು ವಾಂತಿ ಬೇಧಿ.
* ರಕ್ತದಲ್ಲಿನ ಪ್ಲೇಟ್‌ಲೆಟ್ಸ್ (Platelets) ಪ್ರಮಾಣ ತಗ್ಗುವುದು.
ಮುನ್ನೆಚ್ಚರಿಕೆ ಕ್ರಮ: ಮನೆ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಿ. ಯಾವುದೇ ಜ್ವರವಿದ್ದರೂ ನಿರ್ಲಕ್ಷ್ಯ ಮಾಡದೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಿ.
ವರದಿ : ನಾಗರಾಜ್ (ಕೆ.ಕಲ್ಲಹಳ್ಳಿ).
