ರಾಯಚೂರು: ಭಾರತದಲ್ಲಿ ವಾರ್ಷಿಕವಾಗಿ 35–36 ಮಿಲಿಯನ್ ಟನ್ ಯೂರಿಯಾ ಬಳಕೆಯಾಗುತ್ತಿದ್ದರೂ, ಸಬ್ಸಿಡಿ ಯೂರಿಯಾದಲ್ಲಿ ಸುಮಾರು 20-25% ರಷ್ಟು ಅನಧಿಕೃತವಾಗಿ ಕೈಗಾರಿಕೆಗಳಿಗೆ ಮತ್ತು ಇತರೆ ಕ್ಷೇತ್ರಗಳಿಗೆ ಕಳ್ಳಮಾರ್ಗದಲ್ಲಿ ತಿರುಗುತ್ತಿರುವುದು ಆತಂಕಕಾರಿ ವಿಚಾರ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ (ರಿ) ಜಿಲ್ಲಾ ಕಾರ್ಯಾಧ್ಯಕ್ಷರಾದ ಮುಜಾಹಿದ್ ಮರ್ಚೆಡ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ರಾಯಚೂರಿನಲ್ಲಿ ಜಂಟಿ ಪ್ರಕಟಣೆ ನೀಡಿರುವ ಅವರು, ಈ ವ್ಯವಸ್ಥಿತ ಕಳ್ಳದಂಧೆಯಿಂದಾಗಿ ನಿಜವಾದ ರೈತರಿಗೆ ಗೊಬ್ಬರದ ತೊಂದರೆ, ಬೆಲೆ ಏರಿಕೆ ಮತ್ತು ಬೆಳೆ ಉತ್ಪಾದನೆ ಕುಸಿತದಂತಹ ತೀವ್ರ ಪರಿಣಾಮಗಳು ಎದುರಾಗುತ್ತಿವೆ ಎಂದು ಹೇಳಿದ್ದಾರೆ. ಜೊತೆಗೆ ಡಿ.ಎ.ಪಿ. (DAP) ಗೊಬ್ಬರದ ಕೊರತೆ ಮತ್ತು ದರ ಏರಿಕೆಯಿಂದಾಗಿ ಫಾಸ್ಫರಸ್ ಪೋಷಕಾಂಶದ ಲಭ್ಯತೆ ಸೀಮಿತವಾಗಿದ್ದು, ಇದರ ನೇರ ಪರಿಣಾಮವಾಗಿ ಬೆಳೆ ತೂಕ ಹಾಗೂ ಉತ್ಪಾದಕತೆ ಕುಸಿಯುತ್ತಿದೆ; ರೈತರು ಅನಿವಾರ್ಯವಾಗಿ ಹೆಚ್ಚಿದ ಬೆಲೆಯಲ್ಲಿ ಗೊಬ್ಬರ ಖರೀದಿಸಲು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಗೊಬ್ಬರ ವಿತರಣೆ ವ್ಯವಸ್ಥೆಯಲ್ಲಿ ಕೆಲ ಪ್ರದೇಶಗಳಲ್ಲಿ ಅಧಿಕೃತ ದಾಖಲೆಗಳಲ್ಲಿ “ವಿತರಣೆಯಾಗಿದೆ” ಎಂದು ತೋರಿಸಲು ರೈತರ ಬಯೋಮೆಟ್ರಿಕ್ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ರೈತರಿಗೆ ಗೊಬ್ಬರ ನೀಡದೆ ಅವರ ಥಂಬ್ ಪಡೆದು ನಂತರ ಅದನ್ನು ಕಾಳಸಂತೆಕೋರರು ಕಳ್ಳಮಾರುಕಟ್ಟೆಗೆ ತಿರುಗಿಸುತ್ತಿರುವ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಈ ಕಾರಣದಿಂದ ಅಮಾಯಕ ರೈತರು ತಮ್ಮ ಹೆಸರಿನ ಗೊಬ್ಬರವನ್ನು ಪಡೆಯಲು ಸಾಧ್ಯವಾಗದೆ, ಹೊರ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಗೆ ಖರೀದಿಸಬೇಕಾದ ಅಥವಾ ಸಂಪೂರ್ಣವಾಗಿ ಗೊಬ್ಬರ ಸಿಗದೆ ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಕಷ್ಟಗಳ ನೇರ ಪರಿಣಾಮವಾಗಿ ಬೆಳೆ ನಷ್ಟ, ಉತ್ಪಾದನಾ ವೆಚ್ಚಗಳ ಹೆಚ್ಚಳ ಮತ್ತು ಕಡಿಮೆ ಆದಾಯದಿಂದ ರೈತರ ಆರ್ಥಿಕ ಸ್ಥಿತಿ ಅಸ್ಥಿರವಾಗುತ್ತಿದ್ದು, ಮಾನಸಿಕ ಒತ್ತಡದಿಂದ ಕೆಲ ಸಂದರ್ಭಗಳಲ್ಲಿ ದುಃಖಕರ ಘಟನೆಗಳು ವರದಿಯಾಗುತ್ತಿವೆ ಎಂದು ಮುಜಾಹಿದ್ ಮರ್ಚೆಡ್ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆದಲ್ಲಿ, ಗೊಬ್ಬರ ಸರಬರಾಜು ಸರಪಳಿಯನ್ನು ಪಾರದರ್ಶಕವಾಗಿ ಪರಿಶೀಲಿಸಿ ತಕ್ಷಣ ತಪಾಸಣೆ ನಡೆಸಬೇಕು, ಯೂರಿಯಾ ಮತ್ತು ಡಿ.ಎ.ಪಿ. ಗೊಬ್ಬರಗಳ ಅನಧಿಕೃತ ತಿರುಗಾಟ ಮತ್ತು ಕಳ್ಳಸಾಗಣೆಗಳ ಮೇಲೆ ಕಠಿಣ ಕಾನೂನು ಕ್ರಮ ಜಾರಿಗೆ ತರಬೇಕು, ಬಯೋಮೆಟ್ರಿಕ್ ಆಧಾರಿತ ವಿತರಣೆ ವ್ಯವಸ್ಥೆಗಳನ್ನು ತ್ವರಿತವಾಗಿ ಆಡಿಟ್ ಮಾಡಿ ದೋಷಿಗಳಿಗೆ ಶಿಕ್ಷೆ ನೀಡಬೇಕು ಹಾಗೂ ತಾತ್ಕಾಲಿಕವಾಗಿ ಬೆಲೆ ನಿಯಂತ್ರಣ, ಹೆಚ್ಚುವರಿ ಸಬ್ಸಿಡಿ, ಸಾಲ ಮನ್ನಾ ಮತ್ತು ಬೆಂಬಲ ಬೆಲೆಯಂತಹ ಪರಿಹಾರ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಕ್ರಮಗಳಿಲ್ಲದೆ ರೈತರು ಎದುರಿಸುತ್ತಿರುವ ಆರ್ಥಿಕ ನಷ್ಟ ಮತ್ತು ಸಾಮಾಜಿಕ ಅನಿಶ್ಚಿತತೆ ಹೆಚ್ಚಿದರೆ ಗ್ರಾಮೀಣ ಪ್ರಜಾಪ್ರಭುತ್ವದ ಮೂಲಸ್ಥಂಭಗಳೇ ನೊಂದಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿರುವ ಅವರು, ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ತಕ್ಷಣ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಮುಜಾಹಿದ್ ಮರ್ಚೆಡ್ ಒತ್ತಾಯಿಸಿದ್ದಾರೆ.
