ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಗೆ ಬಿಎಂಆರ್‌ಸಿಎಲ್ ಮಾಸ್ಟರ್ ಪ್ಲಾನ್: 16 ಸ್ಟೇಷನ್, 60 ಕಿ.ಮೀ ಮಾರ್ಗದ ಸಂಪೂರ್ಣ ಮಾಹಿತಿ ಇಲ್ಲಿದೆ!

ತುಮಕೂರು: ಬೆಂಗಳೂರು ಮಹಾನಗರದ ಜೀವನಾಡಿಯಾಗಿರುವ ‘ನಮ್ಮ ಮೆಟ್ರೋ’ ಸದ್ಯದಲ್ಲೇ ಕಲ್ಪತರು ನಾಡು ತುಮಕೂರಿಗೂ ಲಗ್ಗೆ ಇಡಲಿದೆ. ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಮಾದಾವರದಿಂದ (BIEC) ತುಮಕೂರು ನಗರದವರೆಗೆ ಒಟ್ಟು 60 ಕಿಲೋಮೀಟರ್ ಉದ್ದದ ನೂತನ ಮೆಟ್ರೋ ಕಾರಿಡಾರ್ ನಿರ್ಮಾಣದ ವಿಸ್ತೃತ ಯೋಜನಾ ವರದಿಯನ್ನು (DPR) ಸಿದ್ಧಪಡಿಸಿದೆ. ಇದು ರಾಜ್ಯದ ಎರಡು ಪ್ರಮುಖ ಜಿಲ್ಲೆಗಳನ್ನು ಸಂಪರ್ಕಿಸುವ ಅತ್ಯಂತ ದೊಡ್ಡ ಸಾರಿಗೆ ಯೋಜನೆಯಾಗಲಿದೆ.

ಕೇವಲ 60 ನಿಮಿಷಗಳಲ್ಲಿ ಬೆಂಗಳೂರಿಗೆ ಎಂಟ್ರಿ!
ಪ್ರಸ್ತುತ ತುಮಕೂರು ಮತ್ತು ಬೆಂಗಳೂರು ನಡುವೆ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಭಾರಿ ವಾಹನ ದಟ್ಟಣೆ (Traffic) ಇರುತ್ತದೆ. ಬಸ್ ಅಥವಾ ರೈಲಿನಲ್ಲಿ ಸಂಚರಿಸಲು ಕನಿಷ್ಠ ಒಂದೂವರೆ ಇಂದ ಎರಡು ಗಂಟೆ ಬೇಕಾಗುತ್ತದೆ. ಆದರೆ ಈ ಮೆಟ್ರೋ ಯೋಜನೆ ಪೂರ್ಣಗೊಂಡರೆ, ಕೇವಲ 1 ಗಂಟೆಯಲ್ಲಿ ತುಮಕೂರಿನಿಂದ ಬೆಂಗಳೂರನ್ನು ತಲುಪಬಹುದಾಗಿದೆ. ಪ್ರತಿದಿನ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಓಡಾಡುವ ಸಾವಿರಾರು ಜನರಿಗೆ ಈ ಯೋಜನೆ ವರದಾನವಾಗಲಿದೆ.

ಎಲ್ಲೆಲ್ಲಿ ಬರಲಿವೆ ಆ 16 ಮೆಟ್ರೋ ನಿಲ್ದಾಣಗಳು?
ವರದಿಯ ಪ್ರಕಾರ, ಪ್ರಸ್ತುತ ಹಸಿರು ಮಾರ್ಗದ (Green Line) ಕೊನೆಯ ನಿಲ್ದಾಣವಾಗಿರುವ ಮಾದಾವರದಿಂದ ಈ ಹೊಸ ಮಾರ್ಗ ಆರಂಭವಾಗಲಿದೆ.ಇದರಲ್ಲಿ16 ಮೆಟ್ರೋ ನಿಲ್ದಾಣಗಳು ಬರುತ್ತವೆ ಅದರಲ್ಲಿ ಪ್ರಮುಖವಾಗಿ:
* ನೆಲಮಂಗಲ
* ಡಾಬಸ್‌ಪೇಟೆ (ಕೈಗಾರಿಕಾ ವಲಯ)
* ಹಿರೇಹಳ್ಳಿ
* ಕ್ಯಾತ್ಸಂದ್ರ
* ತುಮಕೂರು ವಿಶ್ವವಿದ್ಯಾಲಯ (TumakuruUniversity)
* ತುಮಕೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ
* ಶಿರಾ ಗೇಟ್ (ಕೊನೆಯ ನಿಲ್ದಾಣ)

₹18,000 ಕೋಟಿ ವೆಚ್ಚದ ಬೃಹತ್ ಯೋಜನೆ:

ಈ ಯೋಜನೆಗೆ ಎರಡು ಪ್ರಮುಖ ಆರ್ಥಿಕ ಮಾದರಿಗಳನ್ನು ಸಿದ್ಧಪಡಿಸಲಾಗಿದೆ. ಸರ್ಕಾರವೇ ನೇರವಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡರೆ ಒಟ್ಟು ವೆಚ್ಚ ಸುಮಾರು 18,000 ಕೋಟಿ ರೂಪಾಯಿ ಆಗಲಿದೆ. ಒಂದು ವೇಳೆ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ನಿರ್ಮಾಣ ಮಾಡಿದರೆ ವೆಚ್ಚ 20,000 ಕೋಟಿ ರೂಪಾಯಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ವರದಿ : ನಾಗರಾಜ್ (ಕೆ.ಕಲ್ಲಹಳ್ಳಿ)

error: Content is protected !!