ಬೆಂಗಳೂರು:
ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಭವಿಷ್ಯದ ರಾಜಕೀಯ ನಡೆಯ ಕುರಿತು ಅತ್ಯಂತ ಮಹತ್ವದ ಹಾಗೂ ಖಡಕ್ ಹೇಳಿಕೆಯೊಂದನ್ನು ನೀಡಿದ್ದಾರೆ. ತಾವು ಯಾವುದೇ ಕಾರಣಕ್ಕೂ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸಿಎಂ, ಕೊನೆಯುಸಿರಿರುವವರೆಗೂ ಕೋಮುವಾದದ ವಿರುದ್ಧದ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ರಾಜಕೀಯ ವಿರೋಧಿಗಳಿಗೆ ಸವಾಲು ಹಾಕಿದ್ದಾರೆ.
ರಾಷ್ಟ್ರ ರಾಜಕಾರಣದ ಆಫರ್ ತಿರಸ್ಕರಿಸಿದ ಸಿಎಂ!
ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ದೆಹಲಿ ರಾಜಕಾರಣಕ್ಕೆ ಪ್ರವೇಶಿಸಲಿದ್ದಾರೆ ಹಾಗೂ ಹೈಕಮಾಂಡ್ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಜವಾಬ್ದಾರಿ ನೀಡಲಿದೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದವು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ಸ್ವತಃ ಸಿದ್ದರಾಮಯ್ಯ ಅವರೇ ಈಗ ತೆರೆ ಎಳೆದಿದ್ದಾರೆ. “ನನಗೆ ದೆಹಲಿ ರಾಜಕಾರಣಕ್ಕೆ ಹೋಗುವ ಯಾವುದೇ ಆಸಕ್ತಿಯಿಲ್ಲ. ನನ್ನ ರಾಜಕೀಯ ಏನಿದ್ದರೂ ಕರ್ನಾಟಕಕ್ಕೆ ಮಾತ್ರ ಸೀಮಿತ” ಎಂದು ಹೇಳುವ ಮೂಲಕ ಹೈಕಮಾಂಡ್ ರಾಜಕಾರಣದಿಂದ ತಾವು ದೂರವಿರುವುದನ್ನು ಸ್ಪಷ್ಟಪಡಿಸಿದ್ದಾರೆ.
ಕೊನೆಯುಸಿರಿರುವ ತನಕ ಸೌಹಾರ್ದತೆಯ ಹೋರಾಟ’
ತಮ್ಮ ಸೈದ್ಧಾಂತಿಕ ನಿಲುವನ್ನು ಮತ್ತೊಮ್ಮೆ ಗಟ್ಟಿಯಾಗಿ ಪ್ರತಿಪಾದಿಸಿರುವ ಸಿದ್ದರಾಮಯ್ಯ, “ನನ್ನ ದೇಹದಲ್ಲಿ ಜೀವವಿರುವವರೆಗೂ ಕೋಮು ಶಕ್ತಿಗಳ ವಿರುದ್ಧ ಹಾಗೂ ಕೋಮುವಾದದ ರಾಜಕಾರಣದ ವಿರುದ್ಧ ನನ್ನ ಹೋರಾಟ ನಿಲ್ಲುವುದಿಲ್ಲ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ನಾನು ಸದಾ ಮುಂಚೂಣಿಯಲ್ಲಿ ಇರುತ್ತೇನೆ” ಎಂದು ಭಾವುಕರಾಗಿ ನುಡಿದಿದ್ದಾರೆ.
ರಾಜಕೀಯ ವಲಯದಲ್ಲಿ ಹೊಸ ಚರ್ಚೆ!
ಅಧಿಕಾರ ಬದಲಾವಣೆಯ ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ನೀಡಿರುವ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಸಿಎಂ ಸ್ಥಾನ ಬಿಟ್ಟರೂ ತಾವು ರಾಜ್ಯ ರಾಜಕಾರಣದಲ್ಲೇ ಸಕ್ರಿಯರಾಗಿ ಇರಲಿದ್ದಾರೆ ಮತ್ತು ಮುಂಬರುವ ದಿನಗಳಲ್ಲೂ ಸರ್ಕಾರದ ಹಾದಿಗೆ ದಿಕ್ಸೂಚಿಯಾಗಿ ಇರಲಿದ್ದಾರೆ ಎಂಬ ಬಲವಾದ ಸಂದೇಶವನ್ನು ಅವರು ಈ ಮೂಲಕ ರವಾನಿಸಿದ್ದಾರೆ.
ನಾಗರಾಜ್ (ಕೆ.ಕಲ್ಲಹಳ್ಳಿ)
