ಆರ್‌ಸಿಬಿ ಮಾನವೀಯತೆಗೆ ದೇಶವೇ ಫಿದಾ: ಐಪಿಎಲ್ ಟ್ರೋಫಿಯನ್ನು ಕಾಲ್ತುಳಿತದ ದುರಂತದಲ್ಲಿ ಮೃತಪಟ್ಟ 11 ಅಭಿಮಾನಿಗಳಿಗೆ ಸಮರ್ಪಿಸಿದ ನಾಯಕ ರಜತ್ ಪಾಟೀದಾರ್!

ಬೆಂಗಳೂರು:
ಐಪಿಎಲ್ 2026 ರ ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಅಹಮದಾಬಾದ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಅವರು ಈ ಐತಿಹಾಸಿಕ ಟ್ರೋಫಿಯನ್ನು ಕಳೆದ ವರ್ಷ ಬೆಂಗಳೂರಿನ ವಿಜಯೋತ್ಸವದ ವೇಳೆ ನಡೆದ ಭೀಕರ ಕಾಲ್ತುಳಿತದಲ್ಲಿ ಮರಣ ಹೊಂದಿದ 11 ನಿಷ್ಠಾವಂತ ಅಭಿಮಾನಿಗಳಿಗೆ ಸಮರ್ಪಿಸಿದ್ದಾರೆ.

ಕಣ್ಣಾಲಿಗಳು ಒದ್ದೆಯಾಗಿಸಿದ ನಾಯಕನ ಮಾತು:
ಗೆಲುವಿನ ಟ್ರೋಫಿ ಸ್ವೀಕರಿಸಿ ಮಾತನಾಡಿದ ನಾಯಕ ರಜತ್ ಪಾಟೀದಾರ್, “ಈ ಟ್ರೋಫಿ ಕೇವಲ ಆಟಗಾರರಿಗೆ ಸೇರಿದ್ದಲ್ಲ. ಇದನ್ನು ನಾವು ಕಳೆದ ವರ್ಷ ದುರದೃಷ್ಟವಶಾತ್ ನಮ್ಮನ್ನು ಅಗಲಿದ ಆ 11 ಅಭಿಮಾನಿಗಳಿಗೆ ಅರ್ಪಿಸುತ್ತಿದ್ದೇವೆ. ಅವರು ಬೇರೆ ಯಾರೋ ಅಲ್ಲ, ನಮ್ಮ ಆರ್‌ಸಿಬಿ ಕುಟುಂಬದ ಅವಿಭಾಜ್ಯ ಅಂಗವಾಗಿದ್ದರು. ನಮ್ಮ ಯಶಸ್ಸಿನ ಹಿಂದೆ ಆ ಪವಿತ್ರ ಆತ್ಮಗಳ ಆಶೀರ್ವಾದವಿದೆ” ಎಂದು ಭಾವುಕರಾಗಿ ನುಡಿದರು. ನಾಯಕನ ಈ ಮಾತುಗಳು ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಹಾಗೂ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿತು.

ಕಳೆದ ವರ್ಷದ ಆ ಕಪ್ಪು ದಿನ:

ಕಳೆದ ವರ್ಷ (ಜೂನ್ 2025) ಆರ್‌ಸಿಬಿ ತನ್ನ ಮೊದಲ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮದಲ್ಲಿದ್ದಾಗ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಆಯೋಜಿಸಲಾಗಿದ್ದ ವಿಜಯೋತ್ಸವದ ವೇಳೆ ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಉಂಟಾದ ಭೀಕರ ನೂಕುನುಗ್ಗಲು ಮತ್ತು ಕಾಲ್ತುಳಿತದಿಂದಾಗಿ 11 ಜನ ಆರ್‌ಸಿಬಿ ಅಭಿಮಾನಿಗಳು ಜೀವ ಕಳೆದುಕೊಂಡಿದ್ದರು. ಆ ಕಪ್ಪು ದಿನದ ನೆನಪು ಇಂದಿಗೂ ಇಡೀ ಕ್ರೀಡಾಲೋಕವನ್ನು ಕಾಡುತ್ತಿದೆ.

ಅಗಲಿದ ಜೀವಗಳಿಗೆ ಫ್ರಾಂಚೈಸಿಯ ವಿಶಿಷ್ಟ ಗೌರವ:
ಕೇವಲ ಟ್ರೋಫಿ ಸಮರ್ಪಣೆ ಮಾತ್ರವಲ್ಲದೆ, ಆರ್‌ಸಿಬಿ ಮ್ಯಾನೇಜ್‌ಮೆಂಟ್ ಈ ಸೀಸನ್‌ನಾದ್ಯಂತ ಆ 11 ಅಭಿಮಾನಿಗಳ ನೆನಪನ್ನು ಜೀವಂತವಾಗಿರಿಸಿತ್ತು. ತಂಡದ ಆಟಗಾರರು ‘ಜರ್ಸಿ ಸಂಖ್ಯೆ 11’ ಧರಿಸಿ ಗೌರವ ಸಲ್ಲಿಸಿದ್ದರು. ಇದರೊಂದಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಸಹಯೋಗದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಆಸನಗಳನ್ನು (Seats) ಮೃತರ ನೆನಪಿಗಾಗಿ ಕಾಯ್ದಿರಿಸಲಾಗಿದೆ. ಅಲ್ಲದೆ ಆರ್‌ಸಿಬಿ ಕೇರ್ಸ್ ವತಿಯಿಂದ ಮೃತರ ಕುಟುಂಬಗಳಿಗೆ ಆರ್ಥಿಕ ನೆರವನ್ನೂ ಕಲ್ಪಿಸಲಾಗಿದೆ. ಆರ್‌ಸಿಬಿ ತಂಡದ ಈ ಮಾನವೀಯ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಹಾಗೂ ಗಣ್ಯರಿಂದ ಶ್ಲಾಘನೆಯ ಮಹಾಪೂರವೇ ಹರಿದುಬರುತ್ತಿದೆ.

ವರದಿ : ನಾಗರಾಜ್ (ಕೆ.ಕಲ್ಲಹಳ್ಳಿ)

error: Content is protected !!