ಬೆಂಗಳೂರು: ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇಂದು ಮತ್ತೊಂದು ಸುವರ್ಣಾಕ್ಷರದ ದಿನ. ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DKS) ಅವರು ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಲು ನೆಲಮಂಗಲದಲ್ಲಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಲಡ್ಡುಗಳನ್ನು ಸಿದ್ಧಪಡಿಸಿ, ವಿತರಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
300 ಬಾಣಸಿಗರು, 24 ಗಂಟೆಗಳ ನಿರಂತರ ಕೆಲಸ
ಈ ಬೃಹತ್ ಲಡ್ಡು ತಯಾರಿಕೆಯ ಕಾರ್ಯಕ್ಕಾಗಿ ನಾಡಿನ ಮೂಲೆ ಮೂಲೆಗಳಿಂದ ಸುಮಾರು 300ಕ್ಕೂ ಹೆಚ್ಚು ನುರಿತ ಬಾಣಸಿಗರನ್ನು ಕರೆಸಲಾಗಿತ್ತು. ಕಳೆದೆರಡು ದಿನಗಳಿಂದ ಹಗಲಿರುಳು ಶ್ರಮಿಸಿ ಈ ಭರ್ಜರಿ ಸಿಹಿಯನ್ನು ಸಿದ್ಧಪಡಿಸಲಾಗಿದೆ.
ಕ್ಷೇತ್ರದ ಪ್ರತಿ ಮನೆಗೂ ತಲುಪಲಿದೆ
ಸಿಹಿಕೇವಲ ಸಮಾರಂಭಕ್ಕೆ ಬಂದವರಿಗಷ್ಟೇ ಅಲ್ಲದೆ, ನೆಲಮಂಗಲ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಮನೆಗೂ ಈ ಸಂಭ್ರಮ ತಲುಪಬೇಕು ಎಂಬ ಉದ್ದೇಶದಿಂದ ವಿಶೇಷ ಆಯೋಜನೆ ಮಾಡಲಾಗಿದೆ. ಕ್ಷೇತ್ರದ ಸುಮಾರು 90,000ಕ್ಕೂ ಹೆಚ್ಚು ಕುಟುಂಬಗಳಿಗೆ ತಲಾ 750 ಗ್ರಾಂ ತೂಕದ ಲಡ್ಡು ಬಾಕ್ಸ್‌ಗಳನ್ನು ಕಾರ್ಯಕರ್ತರು ಮನೆ ಮನೆಗೆ ತೆರಳಿ ವಿತರಿಸುತ್ತಿದ್ದಾರೆ.
ರಾಜ್ಯಾದ್ಯಂತ ಹಬ್ಬದ ಕಳೆ
ಬೆಂಗಳೂರಿನ ಪ್ರಮಾಣ ವಚನ ಕಾರ್ಯಕ್ರಮದ ವೇದಿಕೆಯಷ್ಟೇ ಅಲ್ಲದೆ, ರಾಜ್ಯದ ಮೂಲೆ ಮೂಲೆಗಳಲ್ಲೂ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸುತ್ತಿದ್ದಾರೆ. ಹೊಸ ಸರ್ಕಾರದ ಆಡಳಿತಾವಧಿಗೆ ಸಾರ್ವಜನಿಕರಿಂದ ಭಾರಿ ಬೆಂಬಲ ಮತ್ತು ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ವರದಿ : ನಾಗರಾಜ್ (ಕೆ.ಕಲ್ಲಹಳ್ಳಿ)
