ಬೆಂಗಳೂರು: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಅಭಿವೃದ್ಧಿ ಮತ್ತು ಯುವಜನತೆಯ ಹಿತದೃಷ್ಟಿಯಿಂದ ಅತ್ಯಂತ ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಕೇವಲ 4 ಗಂಟೆಯೊಳಗೆ ಮೊದಲ ಸಚಿವ ಸಂಪುಟ (Cabinet) ಸಭೆ ಮುಗಿಸಿದ ನೂತನ ಮುಖ್ಯಮಂತ್ರಿಗಳು, ರಾಜ್ಯದಾದ್ಯಂತ ಭಾರಿ ಸಂಚಲನ ಮೂಡಿಸಿರುವ 5 ಪ್ರಮುಖ ಗ್ಯಾರಂಟಿ ಘೋಷಣೆಗಳನ್ನು ಅಧಿಕೃತಗೊಳಿಸಿದ್ದಾರೆ.
ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿಎಂ ಆದ 4 ಗಂಟೆಯಲ್ಲೇ ಪ್ರಕಟಿಸಿದ ಆ 5 ಮಹತ್ವದ ಘೋಷಣೆಗಳ ಸವಿವರ ಇಲ್ಲಿದೆ:
ವಿದ್ಯಾರ್ಥಿಗಳಿಗೆ ‘ಸಂಪೂರ್ಣ ಉಚಿತ ಬಸ್ ಪಾಸ್’:
ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನೂತನ ಸಿಎಂ ಭರ್ಜರಿ ಕೊಡುಗೆ ನೀಡಿದ್ದಾರೆ. ಇನ್ಮುಂದೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಬಸ್ ಪಾಸ್ ಸೌಲಭ್ಯ ಸಿಗಲಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಾರಿಗೆ ವೆಚ್ಚದ ಆತಂಕ ದೂರಾಗಲಿದೆ.
ಇಡೀ ರಾಜ್ಯಕ್ಕೆ ‘ಬಿಟುಎ ಖಾತಾ’ (B2A Khata) ವಿಸ್ತರಣೆ:
ಆಸ್ತಿ ಮಾಲೀಕರು ಹಾಗೂ ಸಾರ್ವಜನಿಕರ ದೀರ್ಘಕಾಲದ ಗೊಂದಲ ಮತ್ತು ಅಲೆದಾಟಕ್ಕೆ ಮುಕ್ತಿ ನೀಡಲು ಕಂದಾಯ ಇಲಾಖೆಯಲ್ಲಿ ಮಹತ್ವದ ಸುಧಾರಣೆ ತರಲಾಗಿದೆ. ಬೆಂಗಳೂರು ಸೇರಿದಂತೆ ಇಡೀ ರಾಜ್ಯಾದ್ಯಂತ ‘ಬಿಟುಎ ಖಾತಾ’ ವ್ಯವಸ್ಥೆಯನ್ನು ವಿಸ್ತರಿಸಲು ಆದೇಶಿಸಲಾಗಿದ್ದು, ಇದರಿಂದ ಆಸ್ತಿ ನೋಂದಣಿ ಪ್ರಕ್ರಿಯೆ ಸರಳಗೊಳ್ಳಲಿದೆ.
ರಸ್ತೆಗಳ ದುರಸ್ತಿಗೆ ₹2,000 ಕೋಟಿ ಬೃಹತ್ ಅನುದಾನ:
ರಾಜ್ಯದಾದ್ಯಂತ ಹಾಳಾಗಿರುವ ಹಾಗೂ ಗುಂಡಿ ಬಿದ್ದಿರುವ ರಸ್ತೆಗಳ ಕಾಯಕಲ್ಪಕ್ಕೆ ನೂತನ ಸರ್ಕಾರ ಮೊದಲ ದಿನವೇ ಬೃಹತ್ ಕೊಡುಗೆ ನೀಡಿದೆ. ರಾಜ್ಯದ ರಸ್ತೆಗಳ ತುರ್ತು ದುರಸ್ತಿ ಮತ್ತು ನವೀಕರಣಕ್ಕಾಗಿ ಬರೋಬ್ಬರಿ ₹2,000 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಿ ಸಿಎಂ ಹಸಿರು ನಿಶಾನೆ ತೋರಿದ್ದಾರೆ.
ವಾರ್ಡ್ ಮತ್ತು ಗ್ರಾಮ ಮಟ್ಟದಲ್ಲಿ ‘ಭಾರತ್ ಜೋಡೋ ಯುವ ಸಂಘಗಳ’ ರಚನೆ:
ಯುವ ಜನತೆಯನ್ನು ಸಾಮಾಜಿಕ ಮತ್ತು ನಾಡಿನ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸುವ ಉದ್ದೇಶದಿಂದ, ರಾಜ್ಯದ ಪ್ರತಿಯೊಂದು ವಾರ್ಡ್ ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ‘ಭಾರತ್ ಜೋಡೋ ಯುವ ಸಂಘಗಳನ್ನು’ ರಚಿಸಲು ಸರ್ಕಾರ ನಿರ್ಧರಿಸಿದೆ. ಇದು ತಳಮಟ್ಟದಲ್ಲಿ ಯುವ ಶಕ್ತಿಯ ಸಂಘಟನೆಗೆ ಹೊಸ ವೇದಿಕೆಯಾಗಲಿದೆ.
ನಿರುದ್ಯೋಗಿಗಳಿಗೆ ‘ಖಾಸಗಿ ಉದ್ಯೋಗ ವಿನಿಮಯ ಕೇಂದ್ರ’:
ರಾಜ್ಯದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಸುಲಭವಾಗಿ ತಲುಪಿಸಲು ಸರ್ಕಾರ ಹೊಸ ದಾರಿ ಕಂಡುಕೊಂಡಿದೆ. ಅರ್ಹ ಅಭ್ಯರ್ಥಿಗಳಿಗೆ ಖಾಸಗಿ ವಲಯದ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಅತ್ಯಾಧುನಿಕ ‘ಖಾಸಗಿ ಉದ್ಯೋಗ ವಿನಿಮಯ ಕೇಂದ್ರ’ (Private Employment Exchange) ಸ್ಥಾಪಿಸುವುದಾಗಿ ಸಿಎಂ ಘೋಷಿಸಿದ್ದಾರೆ.
ವರದಿ : ನಾಗರಾಜ್ (ಕೆ.ಕಲ್ಲಹಳ್ಳಿ)
