ಪಾಕ್ ಉಗ್ರರ ಜೊತೆ ಲಿಂಕ್: ತುಮಕೂರಿನಲ್ಲಿ ಶಂಕಿತ ಉಗ್ರನ ಅರೆಸ್ಟ್! ಸೋಶಿಯಲ್ ಮೀಡಿಯಾ ಚಾಟ್ ಬೆನ್ನಟ್ಟಿ ಶಾಕ್ ನೀಡಿದ ಖಾಕಿ ಪಡೆ

ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಅತ್ಯಂತ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪಾಕಿಸ್ತಾನದ ನಿಷೇಧಿತ ಉಗ್ರಗಾಮಿ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಶಂಕೆಯ ಮೇಲೆ ತನಿಖಾ ಸಂಸ್ಥೆಗಳು ಹಾಗೂ ತುಮಕೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ.

ರಾಷ್ಟ್ರೀಯ ಭದ್ರತೆಗೆ ಆಪತ್ತು ತರಲು ಸಂಚು ರೂಪಿಸುತ್ತಿದ್ದ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಇಡೀ ರಾಜ್ಯಾದ್ಯಂತ ಈ ಸುದ್ದಿ ತೀವ್ರ ಸಂಚಲನ ಸೃಷ್ಟಿಸಿದೆ.

ಸೋಶಿಯಲ್ ಮೀಡಿಯಾ ಚಾಟ್‌ನಿಂದ ಸಿಕ್ಕಿಬಿದ್ದ ಆರೋಪಿ
ಕೇಂದ್ರ ಇಂಟೆಲಿಜೆನ್ಸ್ ವಿಭಾಗ ಹಾಗೂ ಸೈಬರ್ ಕ್ರೈಮ್ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಿದ್ದಾಗ ಈ ಮಹತ್ವದ ಸುಳಿವು ಸಿಕ್ಕಿದೆ. ಬಂಧಿತ ಆರೋಪಿಯು ಫೇಸ್‌ಬುಕ್, ಟೆಲಿಗ್ರಾಂ ಹಾಗೂ ಇನ್‌ಸ್ಟಾಗ್ರಾಮ್‌ಗಳ ಮೂಲಕ ಪಾಕಿಸ್ತಾನದ ಹ್ಯಾಂಡ್ಲರ್‌ಗಳು ಮತ್ತು ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ದೇಶದ ಪ್ರಮುಖ ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಇನ್‌ಪುಟ್‌ಗಳು ಮತ್ತು ಫೋಟೋಗಳನ್ನು ಈತ ಗಡಿಯಾಚೆಗೆ ರವಾನಿಸುತ್ತಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಖಚಿತ ಮಾಹಿತಿ ಆಧರಿಸಿ ಹಠಾತ್ ದಾಳಿ
ಆರೋಪಿಯ ಡಿಜಿಟಲ್ ಚಟುವಟಿಕೆಗಳ ಬಗ್ಗೆ ಪಕ್ಕಾ ಮಾಹಿತಿ ಕಲೆಹಾಕಿದ ಪೊಲೀಸರು ಮತ್ತು ಆಂತರಿಕ ಭದ್ರತಾ ವಿಭಾಗದ (ISD) ಅಧಿಕಾರಿಗಳು, ತುಮಕೂರಿನ ಆತನ ನಿವಾಸದ ಮೇಲೆ ಹಠಾತ್ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಆತನ ಬಳಿಯಿದ್ದ ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳು, ಪಾಸ್‌ಪೋರ್ಟ್ ಹಾಗೂ ಹಾರ್ಡ್ ಡಿಸ್ಕ್‌ಗಳನ್ನು ಜಪ್ತಿ ಮಾಡಲಾಗಿದೆ. ಇವುಗಳನ್ನು ಹೆಚ್ಚಿನ ತಾಂತ್ರಿಕ ವಿಶ್ಲೇಷಣೆಗಾಗಿ ಸೈಬರ್ ಲ್ಯಾಬ್‌ಗೆ ಕಳುಹಿಸಲಾಗಿದೆ.

ನೆಟ್‌ವರ್ಕ್ ಬೇರುಗಳು ದಾವಣಗೆರೆಗೂ ಲಿಂಕ್?
ಪ್ರಾಥಮಿಕ ತನಿಖೆಯ ಪ್ರಕಾರ, ಈ ಅಂತರರಾಷ್ಟ್ರೀಯ ಸಂಚಿನ ಜಾಲ ಬರೀ ತುಮಕೂರಿಗೆ ಮಾತ್ರ ಸೀಮಿತವಾಗಿಲ್ಲ. ಇವನ ಲಿಂಕ್ ಆಧಾರದ ಮೇಲೆ ದಾವಣಗೆರೆ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಪೊಲೀಸರು ದಾಳಿ ಮುಂದುವರಿಸಿದ್ದಾರೆ. ಯುವಕರನ್ನು ದೇಶದ್ರೋಹಿ ಕೃತ್ಯಗಳಿಗೆ ಎತ್ತಿಕಟ್ಟಲು ಹಣದ ಆಮಿಷ ಒಡ್ಡಲಾಗುತ್ತಿತ್ತೇ ಅಥವಾ ಇಸ್ಲಾಮಿಕ್ ಸ್ಟೇಟ್ (IS) ಮಾದರಿಯ ಪ್ರಭಾವಕ್ಕೆ ಒಳಗಾಗಿ ಈತ ಕೆಲಸ ಮಾಡುತ್ತಿದ್ದನೇ ಎಂಬ ನಿಖರ ಕಾರಣವನ್ನು ತಿಳಿಯಲು ಪೊಲೀಸರು ಆರೋಪಿಯನ್ನು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಮುನ್ನೆಚ್ಚರಿಕೆ ವಹಿಸಲು ಪೊಲೀಸರ ಕರೆ
ಘಟನೆ ಭಾರಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತಿರುವ ಪೊಲೀಸ್ ಇಲಾಖೆ, ಸಾಮಾಜಿಕ ಮಾಧ್ಯಮಗಳಲ್ಲಿ ಅಪರಿಚಿತರೊಂದಿಗೆ ಸಂಪರ್ಕ ಬೆಳೆಸುವಾಗ ಯುವಕರು ಮತ್ತು ಸಾರ್ವಜನಿಕರು ಅತ್ಯಂತ ಜಾಗರೂಕರಾಗಿರಬೇಕು ಎಂದು ತಿಳಿಸಿದೆ. ದೇಶ ವಿರೋಧಿ ಚಟುವಟಿಕೆಗಳು ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ವರದಿ : ನಾಗರಾಜ್ (ಕೆ.ಕಲ್ಲಹಳ್ಳಿ)

error: Content is protected !!