ಬೆಂಗಳೂರು: ದೇಶದಲ್ಲಿ ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳ ಹಿನ್ನೆಲೆಯಲ್ಲಿ, ಇಂದಿನಿಂದ (ಜೂನ್ ೭) ಜಾರಿಗೆ ಬರುವಂತೆ ಗೃಹಬಳಕೆಯ ಎಲ್ಪಿಜಿ (LPG) ಸಿಲಿಂಡರ್ ಬೆಲೆಯನ್ನು ಮತ್ತೆ ಹೆಚ್ಚಳ ಮಾಡಲಾಗಿದೆ.
ಪ್ರಸ್ತುತ ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ರಾಜಕೀಯ ಉದ್ವಿಗ್ನತೆ ಹಾಗೂ ಇಂಧನ ಮಾರುಕಟ್ಟೆಯ ಬಿಕ್ಕಟ್ಟಿನಿಂದಾಗಿ ದೇಶಾದ್ಯಂತ 14.2 ಕೆಜಿ ತೂಕದ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ದರವನ್ನು ₹೨೯ ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
*ಮೂರೇ ತಿಂಗಳಲ್ಲಿ ಎರಡನೇ ಬಾರಿ ಶಾಕ್!*
ಇಂಧನ ಕಂಪನಿಗಳು ಕಳೆದ ಮೂರು ತಿಂಗಳ ಅವಧಿಯಲ್ಲಿ ಗೃಹಬಳಕೆಯ ಗ್ಯಾಸ್ ದರವನ್ನು ಹೆಚ್ಚಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ಮಾರ್ಚ್ ತಿಂಗಳ ಆರಂಭದಲ್ಲಿ ಸಿಲಿಂಡರ್ ದರವನ್ನು ₹೬೦ ರಷ್ಟು ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ₹೨೯ ಹೆಚ್ಚಿಸಿರುವುದು ಮಧ್ಯಮ ವರ್ಗದ ಹಾಗೂ ಬಡ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿದೆ.
ಪ್ರಮುಖ ನಗರಗಳಲ್ಲಿ ಇಂದಿನ ಪರಿಷ್ಕೃತ ದರಗಳು:
ಸ್ಥಳೀಯ ತೆರಿಗೆ (Tax) ಹಾಗೂ ಸಾರಿಗೆ ವೆಚ್ಚಗಳ ಆಧಾರದ ಮೇಲೆ ದೇಶದ ವಿವಿಧ ನಗರಗಳಲ್ಲಿ ಇಂದಿನ ಹೊಸ ದರಗಳು ಈ ಕೆಳಗಿನಂತಿವೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ₹೨೯ ಏರಿಕೆಯ ಬಳಿಕ ಗೃಹಬಳಕೆಯ ಸಿಲಿಂಡರ್ ಬೆಲೆ ಸರಿಸುಮಾರು ₹೯೪೪.೫೦ ತಲುಪಿದೆ.
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ₹೯೧೩ ಇದ್ದ ದರ ಇಂದಿನಿಂದ ₹೯۴೨ ಕ್ಕೆ ಏರಿಕೆಯಾಗಿದೆ.
ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಗ್ಯಾಸ್ ದರ ₹೯೧೨.೫೦ ರಿಂದ ₹೯೪೧.೫೦ ಕ್ಕೆ ತಲುಪಿದೆ.
ಬೆಲೆ ಏರಿಕೆಗೆ ಅಸಲಿ ಕಾರಣವೇನು?ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಮತ್ತು ಇಂಧನ ಸರಬರಾಜಿನಲ್ಲಿ ಉಂಟಾಗಿರುವ ಅಡೆತಡೆಗಳೇ ಈ ದಿಢೀರ್ ಬೆಲೆ ಏರಿಕೆಗೆ ಮುಖ್ಯ ಕಾರಣ ಎನ್ನಲಾಗಿದೆ. ಉದ್ಯಮದ ಮೂಲಗಳ ಪ್ರಕಾರ, ಜಾಗತಿಕ ಬಿಕ್ಕಟ್ಟಿನಿಂದಾಗಿ ತೈಲ ಮಾರಾಟ ಕಂಪನಿಗಳು ತೀವ್ರ ನಷ್ಟ ಅನುಭವಿಸುತ್ತಿವೆ. ಈ ನಷ್ಟವನ್ನು ಸರಿದೂಗಿಸಲು ಮತ್ತು ಇಂಧನ ಪೂರೈಕೆಯನ್ನು ಸ್ಥಿರವಾಗಿಡಲು ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಕಂಪನಿಗಳು ಸಮರ್ಥಿಸಿಕೊಂಡಿವೆ.
ಕೇವಲ ಗೃಹಬಳಕೆಯ ಗ್ಯಾಸ್ ಮಾತ್ರವಲ್ಲದೆ, ಜೂನ್ ಆರಂಭದಲ್ಲಿಯೇ ೧೯ ಕೆಜಿಯ ವಾಣಿಜ್ಯ (Commercial) ಸಿಲಿಂಡರ್ ಬೆಲೆಯನ್ನು ಕೂಡ ₹೪೨ ರಿಂದ ₹೫೩.೫೦ ರವರೆಗೆ ಹೆಚ್ಚಿಸಲಾಗಿತ್ತು. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯ ಬೆನ್ನಲ್ಲೇ ಈಗ ಗೃಹಬಳಕೆಯ ಗ್ಯಾಸ್ ದರವೂ ಹೆಚ್ಚಾಗಿರುವುದು ಹೋಟೆಲ್ ಉದ್ಯಮ ಸೇರಿದಂತೆ ಪ್ರತಿಯೊಬ್ಬ ನಾಗರಿಕನಿಗೂ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.
ವರದಿ : ನಾಗರಾಜ್ (ಕೆ.ಕಲ್ಲಹಳ್ಳಿ)
