ತುಮಕೂರು : ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆಯಲು ಪ್ರಾಣವನ್ನೇ ಪಣಕ್ಕಿಡುತ್ತಿರುವ ಯುವಜನತೆಯ ಬೇಜವಾಬ್ದಾರಿತನಕ್ಕೆ ಮತ್ತೊಂದು ಆಘಾತಕಾರಿ ಸಾಕ್ಷಿ ಸಿಕ್ಕಿದೆ. ಜಿಲ್ಲೆಯ ಐತಿಹಾಸಿಕ ಹಾಗೂ ಪ್ರಸಿದ್ಧ ಪ್ರವಾಸಿ ತಾಣವಾದ ದೇವರಾಯನದುರ್ಗ ಬೆಟ್ಟದಲ್ಲಿ ಸೆಲ್ಫಿ ಹಾಗೂ ರೀಲ್ಸ್ ಮಾಡಲು ಹೋಗಿ ಕಾಲೇಜು ಉಪನ್ಯಾಸಕರೊಬ್ಬರು ಕಾಲು ಜಾರಿ ಸುಮಾರು ೧೫ ರಿಂದ ೨೦ ಅಡಿ ಆಳದ ಪ್ರಪಾತಕ್ಕೆ ಬಿದ್ದಿರುವ ಭೀಕರ ಘಟನೆ ಇಂದು ಭಾನುವಾರ ಬೆಳಿಗ್ಗೆ ಸಂಭವಿಸಿದೆ.
ಅರಸೀಕೆರೆ ಕಾಲೇಜಿನ ಉಪನ್ಯಾಸಕ:
ಗಾಯಗೊಂಡ ಉಪನ್ಯಾಸಕರನ್ನು ತುಮಕೂರು ಜಿಲ್ಲೆಯ ಬುಗುಡನಹಳ್ಳಿ ಗ್ರಾಮದ ನಿವಾಸಿ ಶಿವಪ್ರಸಾದ್ ಎಂದು ಗುರುತಿಸಲಾಗಿದೆ. ಇವರು ಹಾಸನ ಜಿಲ್ಲೆಯ ಅರಸೀಕೆರೆಯ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ (Lecturer) ಕಾರ್ಯನಿರ್ವಹಿಸುತ್ತಿದ್ದಾರೆ. ವೀಕೆಂಡ್ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ತಮ್ಮ ಸ್ನೇಹಿತರೊಂದಿಗೆ ದೇವರಾಯನದುರ್ಗ ಬೆಟ್ಟಕ್ಕೆ ಟ್ರಿಪ್ ಬಂದಿದ್ದರು.
ಕ್ಯಾಮೆರಾ ಆನ್ ಆಗುತ್ತಿದ್ದಂತೆ ಜಾರಿದ ಕಾಲು:
ಬೆಟ್ಟದ ಮೇಲಿನ ದಟ್ಟ ಅರಣ್ಯ ಹಾಗೂ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಾ, ಶಿವಪ್ರಸಾದ್ ಅವರು ಅತ್ಯಂತ ಅಪಾಯಕಾರಿ ಕಲ್ಲಿನ ಅಂಚಿನಲ್ಲಿ ನಿಂತು ಮೊಬೈಲ್ನಲ್ಲಿ ಸೆಲ್ಫಿ ಹಾಗೂ ರೀಲ್ಸ್ ಚಿತ್ರೀಕರಿಸಲು ಮುಂದಾಗಿದ್ದಾರೆ. ಈ ವೇಳೆ ಸಡನ್ ಆಗಿ ಬ್ಯಾಲೆನ್ಸ್ ತಪ್ಪಿ ಕಾಲು ಜಾರಿ ಬೆಟ್ಟದ ಕಣಿವೆಯೊಳಗೆ ಬಿದ್ದಿದ್ದಾರೆ.
ಕಿರುಚಾಟ ಕೇಳಿ ಓಡಿ ಬಂದ ಪ್ರವಾಸಿಗರು:
ಶಿವಪ್ರಸಾದ್ ಪ್ರಪಾತಕ್ಕೆ ಬೀಳುತ್ತಿದ್ದಂತೆ ಜೊತೆಯಲ್ಲಿದ್ದ ಸ್ನೇಹಿತರು ಮತ್ತು ಸುತ್ತಮುತ್ತಲಿದ್ದ ಪ್ರವಾಸಿಗರು ತೀವ್ರ ಆತಂಕಗೊಂಡು ಜೋರಾಗಿ ಕಿರುಚಾಡಿದ್ದಾರೆ. ತಕ್ಷಣವೇ ಎಚ್ಚೆತ್ತ ಸ್ಥಳೀಯರು ಹಾಗೂ ಇತರ ಸಾರ್ವಜನಿಕರು ಪ್ರಾಣದ ಹಂಗು ತೊರೆದು ಕಣಿವೆಯ ಕೆಳಗೆ ಇಳಿದು, ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಶಿವಪ್ರಸಾದ್ ಅವರನ್ನು ಮೇಲಕ್ಕೆತ್ತಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ:
ಬೆಟ್ಟದಿಂದ ಬಿದ್ದ ರಭಸಕ್ಕೆ ಉಪನ್ಯಾಸಕ ಶಿವಪ್ರಸಾದ್ ಅವರ ತಲೆ, ಕೈ ಹಾಗೂ ಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿದ್ದು, ತೀವ್ರ ಗಾಯಗಳಾಗಿವೆ. ಸದ್ಯ ಅವರನ್ನು ತುಮಕೂರು ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಪ್ರವಾಸಿ ತಾಣಗಳಲ್ಲಿನ ಕಣಿವೆ ಹಾಗೂ ಕಡಿದಾದ ಬೆಟ್ಟಗಳ ಅಂಚಿನಲ್ಲಿ ಇಂತಹ ಅಪಾಯಕಾರಿ ಸೆಲ್ಫಿ ಸಾಹಸಗಳಿಗೆ ಕೈಹಾಕಬೇಡಿ ಎಂದು ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮತ್ತೊಮ್ಮೆ ಮನವಿ ಮಾಡಿದ್ದಾರೆ.
ವರದಿ : ನಾಗರಾಜ್ (ಕೆ.ಕಲ್ಲಹಳ್ಳಿ) ತುಮಕೂರು
