ಪ್ರೀತಿ ಅನ್ನೋದು ಮನುಷ್ಯ ಬದುಕೋಕೆ ಸಂಜೀವಿನಿ. ಆದ್ರೆ ಅದೇ ಕೆಲವರಲ್ಲಿ ವಿಕೃತ ರೂಪ ತಾಳಿಬಿಡುತ್ತೆ. ಪ್ರೀತಿ ಅನ್ನೋ ಎರಡಕ್ಷರದ ಮೋಹಕ್ಕೆ ಬಿದ್ದು ಅದೆಷ್ಟೋ ಅಮಾಯಕರ ಪ್ರಾಣವೂ ಹೋಗಿದೆ. ಕೆಲವರು ತಮ್ಮ ಪ್ರಾಣವನ್ನೂ ಬಲಿಕೊಟ್ಟುಬಿಡುತ್ತಾರೆ. ಈ ಘಟನೆಯಲ್ಲೂ ಅದೇ ರೀತಿ ಆಗಿದೆ.
ಉತ್ತರ_ಕನ್ನಡ ಜಿಲ್ಲೆಯ ಅಂಕೋಲದ ನಾಗೇಂದ್ರ ಕಳೆದ 6 ವರ್ಷಗಳಿಂದ ರಮ್ಯಾಳನ್ನ ಪ್ರೀತಿ ಮಾಡ್ತಿದ್ದ. ಬೆಂಗಳೂರಿನ ರಾಜೀವ್_ಗಾಂಧಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನೀಶಿಯನ್ ಆಗಿದ್ದ ರಮ್ಯಾ ಕೂಡ ನಾಗೇಂದ್ರನ ಪ್ರೀತಿಯ ಬಲೆಯಲ್ಲಿದ್ದಳು. ವಿಷಯ ಮನೆಯವರಿಗೆ ಮುಟ್ಟಿತ್ತು. ಮದುವೆಗೂ ಒಪ್ಪಿಗೆ ಕೊಟ್ಟಿದ್ರಂತೆ. ಹೀಗಿದ್ರೂ ನಾಗೇಂದ್ರ ಮಾತ್ರ ಇತ್ತೀಚೆಗೆ ವಿಚಿತ್ರವಾಗಿ ವರ್ತಿಸ್ತಿದ್ದನಂತೆ.
ನಾಗೇಂದ್ರನ ವರ್ತನೆ ಸಹಿಸದ ರಮ್ಯಾ, ಆತನ ಫೋನ್ ನಂಬರ್ ಬ್ಲಾಕ್ ಮಾಡಿದ್ದಾಳೆ. ಹೀಗಾಗಿ ಕೆಲದಿನಗಳಿಂದ ಆಕೆಯ ಸಂಪರ್ಕದಲ್ಲಿರಲಿಲ್ಲ. ರೊಚ್ಚಿಗೆದ್ದ ಸೈಕೋ ನಾಗೇಂದ್ರ ಬೆಂಗಳೂರಿಗೆ ಬಂದು, ಬಾಡಿಗೆ ಕಾರು ಬುಕ್ ಮಾಡಿಕೊಂಡು ಆಕೆಯನ್ನ ಬೆಳಿಗ್ಗೆ 11 ಗಂಟೆಗೆ ಜಯನಗರದಲ್ಲಿ ಬಲವಂತವಾಗಿ ಕರೆದೊಯ್ದಿದ್ದಾನೆ. ತುಮಕೂರು ಬಿಟ್ಟು ಕಳ್ಳಂಬೆಳ್ಳದವರೆಗೂ ಯಾವುದೇ ಸಮಸ್ಯೆ ಕಂಡಿಲ್ಲ. ಇಲ್ಲಿಗೆ ಬರುವ ಕೊಂಚ ದೂರದಲ್ಲೇ ಡ್ರೈವರ್, ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಈ ವೇಳೆ ಇಬ್ಬರು ವಾಶ್ ರೂಂಗೆ ಹೊಗಿ ಬಂದಿದ್ದಾರೆ.
ವಾಶ್ ರೂಂಗೆ ಹೋಗಿ ಬರ್ತಿದ್ದಂತೆ ಇಬ್ಬರ ಮಧ್ಯೆ ಅದೇನಾಯ್ತೋ ಏನೋ.? ಜಗಳ ಶುರುವಾಗಿದೆ. ಈ ವೇಳೆ ನಾಗೇಂದ್ರ, ರಮ್ಯಾಗೆ ಚಾಕುನಿಂದ ಚುಚ್ಚಿದ್ದಾನೆ. ಇದನ್ನ ಕಂಡ ಡ್ರೈವರ್ ಕಾರು ಸೈಡಿಗೆ ಹಾಕಿದ್ದಾನೆ. ಡ್ರೈವರ್ ಮತ್ತು ರಮ್ಯಾ ಇಬ್ಬರೂ ಕಾರಿನಿಂದ ಇಳಿದಿದ್ದಾರೆ. ಅಷ್ಟರಲ್ಲಿ ಅಲ್ಲಿ ಬರ್ತಿದ್ದ ಬೈಕ್ ತಡೆದ ಡ್ರೈವರ್, ರಮ್ಯಾಳನ್ನ ಆಸ್ಪತ್ರೆಗೆ ಕಳಿಸಿದ್ದಾನೆ. ಅಲ್ಲಿಂದ ಹೊರಡುವಾಗ ನಾಗೇಂದ್ರ ಕೈಯಲ್ಲಿ ಬಾಂಬಿದೆ ಅಂತ ರಮ್ಯಾ ಹೇಳಿದ್ದಾಳೆ. ಸ್ಥಳಕ್ಕೆ ಹೋದ ಡ್ರೈವರ್ ಒಂದು ಬಾಂಬ್‌ಅನ್ನ ಆತನ ಕೈನಿಂದ ಕಿತ್ತೆಸೆದಿದ್ದಾನೆ. ಆದ್ರೆ, ಅಷ್ಟರಲ್ಲೇ ಮತ್ತೊಂದು ಬಾಂಬ್‌ಗೆ ಬೆಂಕಿ ಹಚ್ತಿದ್ದಂತೆ ಕಾರ್ ಬ್ಲಾಸ್ಟ್ ಆಗಿದೆ.
ಕಾರಿನಲ್ಲಿದ್ದ ಸೈಕೋ ಪ್ರೇಮಿ ಸಜೀವ ದಹನವಾಗಿದೆ. ರಮ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತನಿಖೆ ಆರಂಭಿಸಿರೋ ಪೊಲೀಸರು ಸತ್ಯಾಸತ್ಯತೆ ಬಯಲಿಗೆಳೆಯಬೇಕಿದೆ. ಈ ಕಥೆ ಒಂಥರಾ ಮಲೆಯಾಳಂ ಸಿನಿಮಾದಂತಿದೆ.
ಇವ್ರದ್ದೆಲ್ಲ ಅದೇನ್ ಪ್ರೀತೀನೋ ಏನೋ?
