ಜೈಸಲ್ಮೇರ್‌ನಲ್ಲಿ ರಕ್ಷಣಾ ಸಚಿವಾಲಯದ ಸಲಹಾ ಸಮಿತಿ ಸಭೆ

ರಾಜಸ್ಥಾನ : ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನವೆಂಬರ್ 3 ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ‘ಭಾರತೀಯ ರಕ್ಷಣಾ ಪಡೆಗಳ ಆಧುನೀಕರಣ’ ಕುರಿತ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇಂದಿನ ಮತ್ತು ಉದಯೋನ್ಮುಖ ಭದ್ರತಾ ಸವಾಲುಗಳನ್ನು ಎದುರಿಸಲು ತಾಂತ್ರಿಕವಾಗಿ ಸಶಕ್ತ ಸೇನೆ ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ರಕ್ಷಣಾ ಬಜೆಟ್ ಬಗ್ಗೆ ಮಾಹಿತಿ ನೀಡಿದ ಸಚಿವರು, 2026-27ನೇ ಸಾಲಿನ ರಕ್ಷಣಾ ಬಜೆಟ್ ಅನ್ನು ದಾಖಲೆಯ *7.85 ಲಕ್ಷ ಕೋಟಿ ರೂ.* ಗೆ ಹೆಚ್ಚಿಸಲಾಗಿದೆ. ಇದರಲ್ಲಿ ಆಧುನೀಕರಣಕ್ಕಾಗಿ *2.19 ಲಕ್ಷ ಕೋಟಿ* ಮೀಸಲಿಡಲಾಗಿದೆ ಎಂದು ತಿಳಿಸಿದರು. ರಕ್ಷಣಾ ಉತ್ಪಾದನೆ 2014-15ರಲ್ಲಿ 46,429 ಕೋಟಿ ಇದ್ದದ್ದು, 2025-26ರಲ್ಲಿ 1.78 ಲಕ್ಷ ಕೋಟಿಗೆ ಏರಿಕೆಯಾಗಿದೆ. ರಫ್ತು 2 ಸಾವಿರ ಕೋಟಿಯಿಂದ 40 ಸಾವಿರ ಕೋಟಿಗೆ ಬೆಳೆದಿದೆ.

“2029ರ ವೇಳೆಗೆ 3 ಲಕ್ಷ ಕೋಟಿ ರಕ್ಷಣಾ ಉತ್ಪಾದನೆ ಮತ್ತು 50 ಸಾವಿರ ಕೋಟಿ ರಫ್ತು ಗುರಿ ಹೊಂದಿದ್ದೇವೆ” ಎಂದು ರಾಜನಾಥ್ ಸಿಂಗ್ ಹೇಳಿದರು. ಮೇಕ್ ಇನ್ ಇಂಡಿಯಾ, ಸ್ವಾವಲಂಬಿ ಭಾರತದಡಿ ದೇಶೀಯ ಉದ್ಯಮ, ಸ್ಟಾರ್ಟಪ್‌ಗಳು, ಡಿಆರ್‌ಡಿಒ ಸಹಯೋಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕೃತಕ ಬುದ್ಧಿಮತ್ತೆ, ಸೈಬರ್, ಬಾಹ್ಯಾಕಾಶ, ಡ್ರೋನ್ ತಂತ್ರಜ್ಞಾನ ಬಳಕೆಗೆ ಆದ್ಯತೆ ನೀಡಲಾಗುವುದು ಎಂದರು.

ಸೇನೆಯ ಹೊಸ ಸಂಘಟನಾ ಸ್ವರೂಪಗಳಾದ ‘ಅಸನಿ’, ‘ಭೈರವ್’ ಮತ್ತು ‘ಶಕ್ತಿಬಾನ್’ ಪ್ಲಾಟೂನ್‌ಗಳು ಆಧುನಿಕ ಯುದ್ಧಕ್ಕೆ ಪೂರಕವಾಗಿವೆ ಎಂದು ಅವರು ಶ್ಲಾಘಿಸಿದರು. ಸಭೆಯಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯ ಸಂಸದರು ಮಹತ್ವದ ಸಲಹೆಗಳನ್ನು ನೀಡಿದರು. ರಕ್ಷಣಾ ರಾಜ್ಯ ಸಚಿವ ಸಂಜಯ್ ಸೇಠ್, ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

error: Content is protected !!