ನವದೆಹಲಿ: 2025-26ರಲ್ಲಿ ಭಾರತದ ತೋಟಗಾರಿಕಾ ಉತ್ಪಾದನೆಯು ದಾಖಲೆಯ 386.9 ದಶಲಕ್ಷ ಟನ್ಗಳನ್ನು ತಲುಪಲಿದೆ ಎಂದು ಮೂರನೇ ಮುಂಗಡ ಅಂದಾಜುಗಳು ತಿಳಿಸಿವೆ. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಅಂದಾಜುಗಳನ್ನು ಬಿಡುಗಡೆ ಮಾಡಿದರು.
2024-25ರಲ್ಲಿ 370.7 ದಶಲಕ್ಷ ಟನ್ ಇದ್ದ ಉತ್ಪಾದನೆಯು, ಈ ವರ್ಷ 161.77 ಲಕ್ಷ ಟನ್ ಅಂದರೆ ಶೇ. 4.36ರಷ್ಟು ಹೆಚ್ಚಾಗಲಿದೆ. ಸಾಗುವಳಿ ಪ್ರದೇಶ 301.36 ಲಕ್ಷ ಹೆಕ್ಟೇರ್ನಿಂದ 297.21 ಲಕ್ಷ ಹೆಕ್ಟೇರ್ಗೆ ಇಳಿಕೆಯಾದರೂ ಉತ್ಪಾದನೆ ಹೆಚ್ಚಾಗಿರುವುದು ವಿಶೇಷವಾಗಿದೆ ಎಂದು ಸಚಿವರು ತಿಳಿಸಿದರು.
ಹಣ್ಣಿನ ಉತ್ಪಾದನೆಯು ಶೇ. 4.60ರಷ್ಟು ಹೆಚ್ಚಾಗಿ 1230.66 ಲಕ್ಷ ಟನ್ಗೆ, ತರಕಾರಿ ಉತ್ಪಾದನೆಯು ಶೇ. 4.35ರಷ್ಟು ಹೆಚ್ಚಾಗಿ 2272.68 ಲಕ್ಷ ಟನ್ಗೆ ತಲುಪುವ ನಿರೀಕ್ಷೆಯಿದೆ. ಆಲೂಗಡ್ಡೆ ಉತ್ಪಾದನೆಯು ಶೇ. 11.95ರಷ್ಟು ಏರಿಕೆಯಾಗಿ 655.70 ಲಕ್ಷ ಟನ್ ಆಗಲಿದೆ. ಟೊಮೆಟೊ 214.11 ಲಕ್ಷ ಟನ್, ಈರುಳ್ಳಿ 288.96 ಲಕ್ಷ ಟನ್ ಆಗುವ ಅಂದಾಜಿದೆ.
ಹೂವಿನ ಉತ್ಪಾದನೆಯಲ್ಲಿ ಸುಮಾರು ಶೇ. 14.45ರಷ್ಟು ಬೆಳವಣಿಗೆಯಾಗಿದ್ದು, 48.82 ಲಕ್ಷ ಟನ್ ತಲುಪಲಿದೆ. ತೋಟದ ಬೆಳೆಗಳ ಉತ್ಪಾದನೆ ಶೇ. 7.56ರಷ್ಟು ಹೆಚ್ಚಾಗಿ 182.64 ಲಕ್ಷ ಟನ್, ಸಾಂಬಾರ ಪದಾರ್ಥಗಳ ಉತ್ಪಾದನೆ 123.54 ಲಕ್ಷ ಟನ್ ಆಗುವ ಅಂದಾಜಿದೆ. ಹಣ್ಣು, ತರಕಾರಿ, ಸಾಂಬಾರ ಪದಾರ್ಥಗಳು ಮತ್ತು ಹೆಚ್ಚು ಮೌಲ್ಯದ ಬೆಳೆಗಳತ್ತ ವೈವಿಧ್ಯೀಕರಣವು ರೈತರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಸಚಿವರು ಹೇಳಿದರು.
