ಯಾದಗಿರಿ : ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿ, ಹಲವು ವಿದ್ಯಾರ್ಥಿಗಳಿಗೆ ಗಾಯ

ಯಾದಗಿರಿ : ಖಾಸಗಿ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ ಆಟೋ ಪಲ್ಟಿಯಾಗಿರುವ ಘಟನೆ ಶಹಾಪೂರ ನಗರದ ರಾಜ್ಯ ಹೆದ್ದಾರಿಯ ಬಳಿ ನಡೆದಿದೆ. ಚಾಲಕನ ನಿರ್ಲಕ್ಷ್ಯದಿಂದ ಹೆದ್ದಾರಿ ಪಕ್ಕದ ಹಳ್ಳಕ್ಕೆ ಆಟೋ ಬಿದ್ದಿದೆ. ಇದರಿಂದ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.

 

ಶಹಾಪೂರ ನಗರದ ಖಾಸಗಿ ಶಾಲೆಯಾದ ಡಿಡಿಯು ವಿದ್ಯಾಸಂಸ್ಥೆಗೆ ಸೇರಿದ ವಿದ್ಯಾರ್ಥಿಗಳು ಅಪಘಾತಕ್ಕೀಡಾಗಿದ್ದಾರೆ. ಇತ್ತೀಚೆಗೆ ರಾಯಚೂರ ಜಿಲ್ಲೆಯಲ್ಲಿ ನಡೆದ ಶಾಲಾ ಬಸ್‌ ಅಪಘಾತದ ಘಟನೆ ಮಾಸುವ ಮುನ್ನವೇ ಶಹಾಪೂರದಲ್ಲಿಯೂ ಅಂತಹದ್ದೇ ಅಪಘಾತವೊಂದು ಸಂಭವಿಸಿದೆ. ಅಪಘಾತದಲ್ಲಿ ಓರ್ವ ಬಾಲಕನಿಗೆ ಕೈಗೆ ಪೆಟ್ಟಾಗಿದೆ ಹಾಗೂ ಮೂರು ಜನರಿಗೆ ಗಾಯಗಳಾಗಿವೆ. ಇನ್ನುಳಿದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಶಹಾಪೂರ ನಗರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಕ್ಕಳನ್ನು ಬೇಕಾ ಬಿಟ್ಟಿ ವಾಹನಗಳಲ್ಲಿ ಶಾಲೆಗೆ ಕಳುಹಿಸುವ ಮುನ್ನ ಎಚ್ಚರ. ಆಟೋದಲ್ಲಿ 20 ಕ್ಕೂ ಅಧಿಕ ಮಕ್ಕಳನ್ನು ಕರೆದೊಯ್ಯುವಾಗ ಘಟನೆ ನಡೆದಿದೆ ಎನ್ನುವುದು ಸ್ಥಳೀಯರ ವಾದ. ಮಕ್ಕಳ ಹಿತದೃಷ್ಟಿಯಿಂದ ವಾಹನಗಳ ಸುರಕ್ಷತೆ ಬಗ್ಗೆ ಗಮನ ವಹಿಸಬೇಕಿದೆ. ಸಾರಿಗೆ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.