ಒಟ್ಟಾವಾ: ಕೆನಡಾದ ಟೊರೊಂಟೊ ಪೋರ್ಟ್ ಲ್ಯಾಂಡ್ಸ್ ಬಳಿ ಡಿವೈಡರ್ಗೆ ಕಾರೊಂದು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಭಾರತೀಯರು ಮೃತಪಟ್ಟಿರುವ ಘಟನೆ ಗುರುವಾರ(ಅ.24) ಮಧ್ಯರಾತ್ರಿ ಸಂಭವಿಸಿರುವುದಾಗಿ ವರದಿಯಾಗಿದೆ.
ಮೃತಪಟ್ಟವರನ್ನು ಗುಜರಾತ್ ನ ಗೋಧ್ರಾ ಮೂಲದ ಕೇತಾ ಗೋಹಿಲ್(30) ಮತ್ತು ನೀಲ್ ಗೋಹಿಲ್( 26) ಎಂದು ಗುರುತಿಸಲಾಗಿದ್ದು ಇನ್ನಿಬ್ಬರ ಗುರುತು ಇನ್ನಷ್ಟೇ ಲಭ್ಯವಾಗಬೇಕಿದೆ ಎನ್ನಲಾಗಿದೆ.
ಐವರು ಪ್ರಯಾಣಿಸುತ್ತಿದ್ದ ಕಾರು ಟೊರೊಂಟೊ ಬಳಿ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ ಮತ್ತೋರ್ವ ಯುವತಿ ಗಂಭೀರ ಗಾಯಗೊಂಡಿದ್ದು ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.