ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಮಂಗಳವಾರ ಜಕನಾಳ ಗ್ರಾಮಕ್ಕೆ ಭೇಟಿ ನೀಡಿ ಪಡಿತರ ವಿತರಣೆಯನ್ನು ಪರಿಶೀಲಿಸಿದರು.
ಕಳೆದ ತಿಂಗಳು ಗ್ರಾಮ ಸಂಚಾರದ ಸಂದರ್ಭದಲ್ಲಿ ಶಾಸಕರು ಜಕನಾಳ ಗ್ರಾಮಕ್ಕೆ ಭೇಟಿ ನೀಡಿದ್ದಾಗ, ಪಡಿತರ ಪಡೆಯಲು ಬೇರೆ ಊರಿಗೆ ಹೋಗುವ ಪರಿಸ್ಥಿತಿಯಿದ್ದು, ಒಂದು ದಿನ ಹೆಬ್ಬೆಟ್ಟಿನ ಗುರುತು ನೀಡಲು ಹೋಗಬೇಕು. ಮತ್ತೊಮ್ಮೆ ಪಡಿತರ ಪಡೆಯಲು ಹೋಗಬೇಕು. ಪ್ರತಿ ತಿಂಗಳು 2-3 ದಿನ ಪಡಿತರಕ್ಕಾಗಿ ಅಲೆದಾಡಬೇಕಾಗುತ್ತಿದೆ ಎಂದು ಗ್ರಾಮಸ್ಥರು ಶಾಸಕರ ಎದುರು ಸಮಸ್ಯೆ ಹಂಚಿಕೊಂಡಿದ್ದರು.
ಈ ವೇಳೆ ಶಾಸಕರು ಕೂಡಲೇ ಸಮಸ್ಯೆ ಪರಿಹರಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಅದರಂತೆ ಜಕನಾಳ ಗ್ರಾಮದಲ್ಲಿ ಪಡಿತರ ವಿತರಣೆಯಾಗುತ್ತಿದ್ದು, ಶಾಸಕರು ನ್ಯಾಯಬೆಲೆ ಅಂಗಡಿಗೆ ತೆರಳಿ ಪಡಿತರ ವಿತರಣೆಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಶಾಸಕರಿಗೆ ಧನ್ಯವಾದ ಸಲ್ಲಿಸಿದರು.
ಶಾಸಕರು ಮಾತನಾಡಿ, ಗ್ರಾಮ ಸಂಚಾರದ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಗ್ರಾಮದಲ್ಲಿ ಪಡಿತರ ವಿತರಿಸುವ ವ್ಯವಸ್ಥೆ ಮಾಡಿದ್ದೇನೆ. ಮುಂದೆ ಗ್ರಾಮದಲ್ಲಿ ನಿರಂತರವಾಗಿ ಪಡಿತರ ವಿತರಣೆಯಾಗಲಿದೆ. ಏನೆ ಸಮಸ್ಯೆಯಿದ್ದರೂ ನೇರವಾಗಿ ನನಗೆ ತಿಳಿಸಿದಲ್ಲಿ ಸರಿಪಡಿಸುತ್ತೇನೆ ಎಂದರು.
ಪಡಿತರ ನಿಯಮಿತವಾಗಿ ವಿತರಿಸಬೇಕು. ಯಾವುದೇ ರೀತಿಯ ಅಕ್ರಮ ಮತ್ತು ತಾರತಮ್ಯಗಳಿಗೆ ಆಸ್ಪದ ಇಲ್ಲದಂತೆ ಕೆಲಸ ಮಾಡಬೇಕು. ಬಡವರಿಂದ ಹಣ ವಸೂಲಿಯಂತಹ ದೂರುಗಳು ಬಂದರೆ ಸುಮ್ಮನಿರುವುದಿಲ್ಲವೆಂದು ನ್ಯಾಯಬೆಲೆ ಅಂಗಡಿಯವರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ರಾವಸಾಬ್ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ರಾಚಯ್ಯ ಸ್ವಾಮಿ