ಬೀದರ್ : ಪ್ರಸ್ತುತ ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷದ ಬೀದರ್ ಜಿಲ್ಲಾಧ್ಯಕ್ಷರಾಗಿದ್ದ ರಮೇಶ್ ಪಾಟೀಲ್ ಸೋಲಪೂರ್ ರವರನ್ನು ಮತ್ತೊಮ್ಮೆ ಜಿಲ್ಲಾಧ್ಯಕ್ಷರನ್ನಾಗಿ ಮುಂದುವರಿಸಿ ಮಾಜಿ ಪ್ರಧಾನ ಮಂತ್ರಿಗಳು, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಹೆಚ್.ಡಿ ದೇವೇಗೌಡರವರು ನೇಮಕಾತಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಜೆ.ಪಿ ಭವನದ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಹೆಚ್.ಡಿ ಕುಮಾರಸ್ವಾಮಿರವರು ರಮೇಶ್ ಪಾಟೀಲ್ ಸೋಲಪೂರ್ ರವರಿಗೆ ನೇಮಕಾತಿ ಆದೇಶ ಪತ್ರವನ್ನು ವಿತರಿಸಿ ಶುಭ ಕೋರಿದ್ದಾರೆ.
ಹೆಚ್.ಡಿ ದೇವೇಗೌಡರು ನೀಡಿದ ಆದೇಶ ಪತ್ರದಲ್ಲಿ ‘ಶ್ರೀ ರಮೇಶ್ ಪಾಟೀಲ್ ಸೋಲಪೂರ್ ರವರೇ, ಬೀದರ್ ಜಿಲ್ಲಾ ಜನತಾದಳ (ಜಾತ್ಯಾತೀತ) ಪಕ್ಷದ ಅಧ್ಯಕ್ಷರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ತಮ್ಮನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
ತಾವು ಈ ಗುರುತರವಾದ ಜವಾಬ್ದಾರಿಯನ್ನು ವಹಿಸಿಕೊಂಡು. ಪಕ್ಷದ ತತ್ವ ಹಾಗೂ ಸಿದ್ದಾಂತಗಳಿಗೆ ಬದ್ದರಾಗಿ, ಪಕ್ಷದ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬೀದರ ಜಿಲ್ಲೆಯಲ್ಲಿ ಜನತಾದಳ (ಜಾತ್ಯತೀತ) ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸಿ, ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತೀರೆಂದು ಶುಭ ಕೋರುತ್ತೇನೆ.’ ಎಂದು ತಿಳಿಸಲಾಗಿದೆ.
ಆದೇಶ ಪತ್ರ ವಿತರಣೆಯ ಸಂದರ್ಭದಲ್ಲಿ ಕೇಂದ್ರ ಸಚಿವರು, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಡಿ ಕುಮಾರಸ್ವಾಮಿರವರೊಂದಿಗೆ ಪಕ್ಷದ ಕೋರ್ ಕಮಿಟಿಯ ರಾಜ್ಯಾಧ್ಯಕ್ಷರಾದ ಕೃಷ್ಣರೆಡ್ಡಿ ,ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್, ವೆಂಕಟರಾವ್ ನಾಡಗೌಡ, ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿರವರು ಸೇರಿದಂತೆ ಅನೇಕರಿದ್ದರು.
