ಹುಕ್ಕೇರಿ: ಮೈಸೂರು ದಸರಾ ನಾಡಿನ ವೈಭವದ ಪ್ರತೀಕವಾದರೆ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿರೇಮಠದ ದಸರಾ ಉತ್ಸವ ಭಾವೈಕ್ಯತೆಯ ಪ್ರತೀಕವಾಗಿ ನಾಡಿನಾದ್ಯಂತ ಗುರುತಿಸಿಕೊಂಡಿದೆ.
ಧರ್ಮ, ಸಂಸ್ಕೃತಿ, ಪರಂಪರೆ ಹಾಗೂ ಭಾವೈಕ್ಯತೆಯ ಸಂಗಮಕ್ಕೆ ಸಾಕ್ಷಿಯಾಗಿರುವ ಹುಕ್ಕೇರಿ ಹಿರೇಮಠದ ಐತಿಹಾಸಿಕ ದಸರಾ ಉತ್ಸವ-2026ಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಚಿಂದರಗಿ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಹಿರೇಮಠದ ಪೂಜ್ಯರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಗಣಪತಿ ಪೂಜೆ ಹಾಗೂ ದೀಪ ಬೆಳಗಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಠದ ಆವರಣವನ್ನು ವಿದ್ಯುತ್ ದೀಪಗಳಿಂದ ಹಾಗೂ ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೆಇಬಿ ಅಧ್ಯಕ್ಷ ಮಹಾವೀರ ನೆಲಜಗಿ, ವಿ.ಕೆ. ಪಾಟೀಲ ಸೇರಿದಂತೆ ತಾಲೂಕಿನ ಹಲವು ಗಣ್ಯರು, ಜನಪ್ರತಿನಿಧಿಗಳು ಹಾಗೂ ನೂರಾರು ಭಕ್ತರು ಭಾಗವಹಿಸಿ ಉತ್ಸವದ ಸಂಭ್ರಮಕ್ಕೆ ಮೆರಗು ತಂದರು.
ಹುಕ್ಕೇರಿ ಹಿರೇಮಠದ ದಸರಾ ಉತ್ಸವವು ಧಾರ್ಮಿಕ ಆಚರಣೆಗೆ ಮಾತ್ರ ಸೀಮಿತವಾಗದೆ, ಸಾಮಾಜಿಕ ಸಾಮರಸ್ಯ, ಸಾಂಸ್ಕೃತಿಕ ಪರಂಪರೆ ಹಾಗೂ ಸರ್ವಧರ್ಮಗಳ ನಡುವಿನ ಭಾವೈಕ್ಯತೆಯನ್ನು ಸಾರುವ ಮಹತ್ವದ ಉತ್ಸವವಾಗಿದೆ. ಮುಂಬರುವ ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಪ್ರವಚನಗಳು ಹಾಗೂ ಅನ್ನದಾಸೋಹ ಕಾರ್ಯಕ್ರಮಗಳು ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ವರದಿ : ಸದಾನಂದ
