ರಾಯಬಾಗ ತಾಲೂಕಿನ ಅಲಕನೂರಿನ ಕರಿಸಿದ್ದೇಶ್ವರ ದೇವಸ್ಥಾನದ ಪಟ್ಟದ ಆನೆ ಧ್ರುವನ ಅಕಾಲಿಕ ಮರಣ – ಭಕ್ತರಲ್ಲಿ ಶೋಕ

ರಾಯಬಾಗ : ತಾಲೂಕಿನ ಅಳಕನೂರು ಗ್ರಾಮದ ಸುಪ್ರಸಿದ್ಧ ಶ್ರೀ ಕರಿಸಿದ್ದೇಶ್ವರ ದೇವಸ್ಥಾನದ ಪಟ್ಟದ ಆನೆ ಧ್ರುವನು ಅಕಾಲಿಕವಾಗಿ ಮೃತಪಟ್ಟಿದ್ದು, ಭಕ್ತರಲ್ಲಿ ತೀವ್ರ ಶೋಕ ಮೂಡಿಸಿದೆ. ದೇವರ ದರ್ಶನಕ್ಕೆ ಬರುತ್ತಿದ್ದ ಭಕ್ತರು ಆನೆಯ ದರ್ಶನ ಮಾಡಿ, ಹಣ್ಣು ತಿನ್ನಿಸಿ, ಆನೆಯನ್ನು ಸ್ಪರ್ಶಿಸಿ ಹೋಗುವುದು ವಾಡಿಕೆಯಾಗಿತ್ತು.

ಕರ್ನಾಟಕದಲ್ಲಿ ಇರುವ ಒಟ್ಟು ಪಳಗಿದ ಆನೆಗಳಲ್ಲಿ ಅತ್ಯಂತ ಹೆಚ್ಚು ತೂಕ ಹಾಗೂ ಎತ್ತರ ಹೊಂದಿದ ದಾಖಲೆ ಧ್ರುವನ ಹೆಸರಿನಲ್ಲಿತ್ತು. ಇತ್ತೀಚಿನ ದಸರಾದ ಅಂಬಾರಿ ಹೊತ್ತ ಆನೆಗಿಂತಲೂ ಹೆಚ್ಚಿನ ಎತ್ತರ ಹಾಗೂ ತೂಕವನ್ನು ಹೊಂದಿದ್ದ ಆನೆ ಇದಾಗಿತ್ತು ಎಂದು ತಿಳಿದು ಬಂದಿದೆ.

ಕಳೆದ ಒಂದು ವಾರದಿಂದ ಧ್ರುವನು ಅನಾರೋಗ್ಯದಿಂದ ಬಳಲುತ್ತಿದ್ದನು. ಅರಣ್ಯ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ನುರಿತ ವೈದ್ಯರು ಚಿಕಿತ್ಸೆ ನೀಡುತ್ತಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಆನೆ ಮರಣ ಹೊಂದಿದೆ.

ನಿಯಮಾನುಸಾರ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಅಂತ್ಯಸಂಸ್ಕಾರಕ್ಕೆ ಕ್ರಮ ಕೈಗೊಂಡರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಭಕ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದು, ಧ್ರುವನಿಗೆ ಅಂತಿಮ ನಮನ ಸಲ್ಲಿಸಿದರು.

error: Content is protected !!