ಬೆಳಗಾವಿ : ಗೃಹಲಕ್ಷ್ಮಿ ಯೋಜನೆಯ ಹಣ ಕೊಡಲು ನಿರಾಕರಿಸಿದ ಅಜ್ಜಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿ, ಆಕೆಯ ಬಳಿಯಿದ್ದ 2,300 ರೂ. ಹಾಗೂ ಕೊರಳಲ್ಲಿದ್ದ ಎರಡು ಬಂಗಾರದ ಸರಗಳನ್ನು ಕಿತ್ತುಕೊಂಡು ಶವವನ್ನು ನದಿಯಲ್ಲಿ ಬಿಸಾಡಿದ ಹೀನ ಕೃತ್ಯ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸರು, ಈ ಕುರಿತು ಮಾಹಿತಿ ನೀಡಿದರು.
ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದ ಹಮ್ಮಣ್ಣಾ ಬಾಲಪ್ಪಾ ಸನದಿ (78) ಕಳೆದ ನ.10ರಂದು ಪಾಶ್ಚಾಪುರ ಸಂತೆಗೆ ಹೋಗುವುದಾಗಿ ಮನೆಯಿಂದ ತೆರಳಿದ್ದರು. ಆದರೆ, ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ನ.15ರಂದು ಸಂಜೆ ಜಿನರಾಳ ಗ್ರಾಮದ ಬಳಿಯ ಘಟಪ್ರಭಾ ನದಿ ಡ್ಯಾಂ ಹಿನ್ನೀರಿನಲ್ಲಿ ಎರಡು ಗೋಣಿ ಚೀಲಗಳಲ್ಲಿ ಕಲ್ಲುಗಳೊಂದಿಗೆ ಕಟ್ಟಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು.
ಈ ಕುರಿತು ಮೃತಳ ಮಗಳು *ಬಿಮ್ಮವ್ವ ಪರಸಪ್ಪ ಈರನಟ್ಟಿ* ನೀಡಿದ ದೂರಿನ ಮೇರೆಗೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ತನಿಖೆಯಲ್ಲಿ ಮೃತಳ ಸ್ವಂತ ಮೊಮ್ಮಗ ಭೀಮಪ್ಪ ರಾಮಪ್ಪ ಸನದಿ (20) ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು. ಮೃತ ವೃದ್ಧೆಗೆ ಬರುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ತನಗೂ ಪಾಲು ನೀಡುವಂತೆ ಆರೋಪಿ ಕಳೆದ ಕೆಲವು ವರ್ಷಗಳಿಂದ ಒತ್ತಾಯಿಸುತ್ತಿದ್ದ ಎಂದು ಅವರು ಹೇಳಿದರು.
ನ.10ರಂದು ಅಜ್ಜಿಯನ್ನು ಬೈಕ್ನಲ್ಲಿ ಕರೆದುಕೊಂಡು ಗವಿ ಸಿದ್ದೇಶ್ವರ ಗುಡ್ಡಕ್ಕೆ ತೆರಳಿದ್ದ ಆರೋಪಿ, ಅಲ್ಲಿ ಗೃಹಲಕ್ಷ್ಮಿ ಹಣದ ವಿಚಾರವಾಗಿ ಮತ್ತೆ ಜಗಳವಾಡಿದ್ದಾನೆ. ಅಜ್ಜಿ ಹಣ ನೀಡಲು ನಿರಾಕರಿಸಿದಾಗ ಸಿಟ್ಟಿನಿಂದ ಆಕೆಯನ್ನು ಕೆಳಗೆ ತಳ್ಳಿ, ಕುತ್ತಿಗೆ ಹಿಸುಕಿ ಹಾಗೂ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಬಳಿಕ ಶವವನ್ನು ಗುಡ್ಡದಲ್ಲೇ ಬಿಟ್ಟು, ಪಾಶ್ಚಾಪುರಕ್ಕೆ ತೆರಳಿ ಎರಡು ಗೋಣಿ ಚೀಲಗಳನ್ನು ತಂದಿದ್ದಾನೆ. ಮೃತಳ ಬಳಿಯಿದ್ದ 2,300 ರೂ. ನಗದು ತೆಗೆದುಕೊಂಡು, ಶವವನ್ನು ಗೋಣಿ ಚೀಲಗಳಲ್ಲಿ ತುಂಬಿ, ಕಲ್ಲುಗಳೊಂದಿಗೆ ಕಟ್ಟಿದ್ದಾನೆ. ರಾತ್ರಿ ಬೈಕ್ನಲ್ಲಿ ಶವ ಸಾಗಿಸಿ ಜಿನರಾಳ ಗ್ರಾಮದ ಬಳಿಯ ಡ್ಯಾಂ ಹಿನ್ನೀರಿಗೆ ಬಂದು, ಮೃತಳ ಕೊರಳಲ್ಲಿದ್ದ ಎರಡು ಬಂಗಾರದ ಸರಗಳನ್ನು ಕಿತ್ತುಕೊಂಡು ಶವವನ್ನು ನೀರಿಗೆ ಬಿಸಾಡಿದ್ದಾನೆ ಎಂದು ಪೊಲೀಸರು ವಿವರಿಸಿದರು.
