ಔರಾದ: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು, ಮಕ್ಕಳಿಗೆ ಪಾಠದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಕಲಿಸಬೇಕು. ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡಬೇಕು. ದೇಶಪ್ರೇಮ ಮೂಡಿಸಬೇಕು ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಶಿಕ್ಷಕರಿಗೆ ತಿಳಿಸಿದರು.
ಔರಾದ(ಬಿ) ಪಟ್ಟಣದ ಡಾ.ಗುರುಪಾದಪ್ಪ ಕಲ್ಯಾಣ ಮಂಟಪದಲ್ಲಿ ಸೆ.21ರಂದು ಜರುಗಿದ 2024-25ನೇ ಸಾಲಿನ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಔರಾದ(ಬಿ) ಕ್ಷೇತ್ರದಲ್ಲಿ ಶಿಕ್ಷಣ ರಂಗ ಸಾಕಷ್ಟು ಸುಧಾರಿಸಿದೆ. ಪ್ರತಿ ವರ್ಷ ಫಲಿತಾಂಶದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಆದರೆ ಈ ವರ್ಷ ಕಡಿಮೆಯಾಗಿರುವುದಕ್ಕೆ ಬೇಸರವಿದೆ. ಎಲ್ಲ ಶಿಕ್ಷಕರು ಫಲಿತಾಂಶ ಸುಧಾರಣೆಗೆ ಪ್ರಯತ್ನಿಸಬೇಕು. ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿಯೂ ಸಾಧಿಸಬೇಕೆಂಬ ಉದ್ದೇಶದಿಂದ ಔರಾದ್ನಲ್ಲಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಇದರ ಸದ್ಬಳಕೆಯಾಗಬೇಕು. ನಮ್ಮ ಕ್ಷೇತ್ರದ ಮಕ್ಕಳು ಕೂಡ ರಾಜ್ಯಮಟ್ಟದಲ್ಲಿ ಗೆಲುವು ಸಾಧಿಸಬೇಕು. ಈ ದಿಸೆಯಲ್ಲಿ ಶಿಕ್ಷಕರು ಪ್ರಯತ್ನ ವಹಿಸಬೇಕು ಎಂದರು.
ನಾಡಿಗೆ ಅನ್ನ ನೀಡಿ ಕಾಪಾಡುವ ರೈತರು, ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರು ಹಾಗೂ ದೇಶದ ರಕ್ಷಣೆಗೆ ಹೋರಾಡುವ ಸೈನಿಕರೆಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಇವರನ್ನು ಸದಾ ಗೌರವಿಸುತ್ತೇನೆಂದು ತಿಳಿಸಿದ ಅವರು, ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿರುವ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮ ವಹಿಸುತ್ತಿದ್ದು, ಪ್ರತಿ ವರ್ಷ ಶಿಕ್ಷಕರು, ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರ ಆತ್ಮಬಲವನ್ನು ವೃದ್ಧಿಸುವ ಕೆಲಸ ಮಾಡುತ್ತಾ ಬರುತ್ತಿದ್ದೇನೆ. ನನ್ನ ಕ್ಷೇತ್ರದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತು ಐಎಎಸ್, ಐಪಿಎಸ್ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಈ ಸಂಕಲ್ಪದೊAದಿಗೆ ಕೆಲಸ ಮಾಡುತ್ತಿದ್ದು, ಶಿಕ್ಷಕರು ಸಹಕರಿಸಬೇಕು ಎಂದು ಕೋರಿದರು.
ಶಿಕ್ಷಣ ಕೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದ್ದು, ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ. ಐಟಿಐ, ಡಿಪ್ಲೋಮಾ ಕಾಲೇಜುಗಳನ್ನು ನಿರ್ಮಿಸಲಾಗಿದೆ. ಕಿತ್ತೂರು ರಾಣಿ ಚನ್ನಮ್ಮ, ಡಾ.ಬಿ.ಆರ್ ಅಂಬೇಡ್ಕರ್, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಆದರ್ಶ ವಿದ್ಯಾಲಯಗಳನ್ನು ನಿರ್ಮಿಸಲಾಗುತ್ತಿದೆ. ಶಿಕ್ಷಣದ ಅಭಿವೃದ್ಧಿಗೆ ಸಂಬAಧಿಸಿದAತೆ ಯಾವುದೇ ಕೆಲಸವಿರಲಿ ಶಿಕ್ಷಕರು ನನ್ನನ್ನು ನೇರವಾಗಿ ಭೇಟಿಯಾಗಿ ಈಡೇರಿಸಿಕೊಳ್ಳಬಹುದು. ಶಿಕ್ಷಣದ ಪ್ರಗತಿಗೆ ಸದಾ ಬದ್ಧನಿದ್ದೇನೆ ಎಂದರು.
ಔರಾದ(ಬಿ) ಮತ್ತು ಕಮಲನಗರ ತಾಲ್ಲೂಕಿನ ಸಮಗ್ರ ಅಭಿವೃದ್ದಿಗೆ ನಿರಂತರ ಶ್ರಮ ವಹಿಸುತ್ತಿದ್ದು, ಬಲ್ಲೂರ್ನಲ್ಲಿ ಸಿಪೆಟ್ ಕೇಂದ್ರ ಮಂಜೂರಾಗಿದ್ದು, ಕೆಲಸ ಆರಂಭಿಸಲಾಗುತ್ತದೆ. ನಾಗೂರ(ಬಿ)ನಲ್ಲಿ 220 ಕೆ.ವಿ ವಿದ್ಯುತ್ ಉಪ ಕೇಂದ್ರ ನಿರ್ಮಾಣ ಕೆಲಸ ನಡೆಯುತ್ತಿದೆ. ಕೆರೆ ತುಂಬುವ ಯೋಜನೆ, ಕಾರಂಜಾ ಜಲಾಶಯದಿಂದ ಔರಾದಗೆ ನೀರು ಪೂರೈಸುವ ಯೋಜನೆಗಳು ಅನುದಾನದ ಕೊರತೆಯಿಂದಾಗಿ ನಿಂತಿದ್ದು, ಎಲ್ಲ ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಲಾಗುವುದು ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಭಾಲ್ಕಿಯ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದ್ದೇವರು ಮಾತನಾಡಿ, ಶಾಸಕ ಪ್ರಭು ಚವ್ಹಾಣ ಅವರು ಸಮಾಜದಲ್ಲಿ ಅತಿ ಹೆಚ್ಚು ಗೌರವಕ್ಕೆ ಪಾತ್ರರಾಗಿರುವ ಶಿಕ್ಷಕರನ್ನು ಪ್ರತಿ ವರ್ಷ ಸನ್ಮಾನಿಸುತ್ತಿರುವುದು ಆದರ್ಶ ಕೆಲಸವಾಗಿದೆ. ಅನಾಥ ಮಕ್ಕಳನ್ನು ದತ್ತು ಪಡೆದು ಶಿಕ್ಷಣ ಕೊಡಿಸುವುದು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿರುವುದು ಅಪರೂಪದ ಕಾರ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರು ಔರಾದ(ಬಿ) ಹಾಗೂ ಕಲನನಗರ ತಾಲ್ಲೂಕಿನ ಎಲ್ಲ ನಿವೃತ್ತ ಶಿಕ್ಷಕರು, ಮರಣ ಹೊಂದಿದ ಶಿಕ್ಷಕರ ಅವಲಂಬಿತರು ಹಾಗೂ ಎಲ್ಲ ಶಾಲಾ-ಕಾಲೇಜಗಳ ಉಪನ್ಯಾಸಕರು ಮತ್ತು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಜಯಿಸಿ ರಾಜ್ಯ ಮಟ್ಟಕ್ಕೆ ಅರ್ಹತೆ ಪಡೆದ ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ಶಾಸಕರು ಸನ್ಮಾನಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾರಾಣಿ ನಾಯಕ್, ಪ್ರಕಾಶ ರಾಠೋಡ್, ಸಂಜಯ ಮೇತ್ರೆ, ಬಲಭೀಮ ಕುಲಕರ್ಣಿ, ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಪ್ರತೀಕ ಚವ್ಹಾಣ, ಶಾಲೀವಾನ್ ಉದಗೀರೆ, ನಯೀಮೋದ್ದಿನ್, ಸಂತೋಷ ರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ರೆಡ್ಡಿ ಮಾಲಿಪಾಟೀಲ್, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೆಹಬೂಬ್ ಪಾಟೀಲ, ಪಂಢರಿ ಆಡೆ, ಬಸವರಾಜ ಪಾಟೀಲ, ಸಂಜುಕುಮಾರ ಶೆಟಕಾರ, ಶಿವಶರಣಪ್ಪ ವಲ್ಲೆಪೂರೆ ಸೇರಿದಂತೆ ಎಲ್ಲ ಶಾಲಾ-ಕಾಲೇಜುಗಳ ಶಿಕ್ಷಕರು ಉಪಸ್ಥಿತರಿದ್ದರು.
ವರದಿ : ರಾಚಯ್ಯ ಸ್ವಾಮಿ