ಲಿತ್ ಫೈಲ್ಸ್ಗ್ರಾಮದ ಮುಖ್ಯ ರಸ್ತೆಯಲ್ಲಿ ದಲಿತ ಮಹಿಳೆಯ ಶವಯಾತ್ರೆಗೆ ಸವರ್ಣೀಯರಿಂದ ಅಡ್ಡಿ

ತಮಿಳುನಾಡಿನ : ತಮಿಳುನಾಡಿನ ತಿರುವಣ್ಣಾಮಲೈನಿಂದ ಸುಮಾರು 45 ಕಿಲೋಮೀಟರ್ ದೂರದಲ್ಲಿರುವ ಮೋತಕ್ಕಲ್ ಗ್ರಾಮದಲ್ಲಿ ಕಳೆದ ಸೋಮವಾರ (ಸೆ.30) ದಲಿತ ಮಹಿಳೆಯೊಬ್ಬರ ಶವಯಾತ್ರೆಗೆ ಪ್ರಬಲ ಜಾತಿಯ ಗುಂಪು ಆಕ್ಷೇಪ ವ್ಯಕ್ತಪಡಿಸಿದೆ. ತಮ್ಮ ಪ್ರದೇಶದ ಮಾರ್ಗದ ದುಸ್ಥಿತಿಯಿಂದಾಗಿ ಗ್ರಾಮದ ಮುಖ್ಯರಸ್ತೆಯ ಮೂಲಕ ಮೃತದೇಹ ಸಾಗಿಸಲು ದಲಿತ ಕುಟುಂಬ ನಿರ್ಧರಿಸಿತ್ತು ಎಂದು ದಿ ಮೂಕನಾಯಕ ವರದಿ ಮಾಡಿದೆ.

 

ವರದಿಯ ಪ್ರಕಾರ, 70 ವರ್ಷದ ದಲಿತ ಮಹಿಳೆ ಎಸ್.ಕಿಲಿಯಾಂಬಾಳ್ ಅವರು ವಯೋಸಹಜ ಅನಾರೋಗ್ಯದಿಂದ ಭಾನುವಾರ ಸಂಜೆ ದಲಿತ ಕಾಲೋನಿಯಲ್ಲಿರುವ ತಮ್ಮ ಮಗಳ ಮನೆಯಲ್ಲಿ ಸಾವನ್ನಪ್ಪಿದ್ದರು. ದಲಿತರ ಸ್ಮಶಾನ ಊರ ಹೊರಗೆ ಇರುವುದರಿಂದ ಅಲ್ಲಿಗೆ ಶವ ಕೊಂಡೊಯ್ಯಬೇಕಿತ್ತು. ಗ್ರಾಮದಲ್ಲಿ ದಲಿತರಿಗೆ ಮತ್ತು ಸವರ್ಣಿಯರಿಗೆ ಶವಯಾತ್ರೆ ನಡೆಸಲು ಪ್ರತ್ಯೇಕ ರಸ್ತೆಗಳಿವೆ. ದಲಿತ ಕೇರಿಯ ರಸ್ತೆ ದುಸ್ಥಿಯಿಂದ ಕೂಡಿದೆ. ಹಾಗಾಗಿ, ಸೋಮವಾರ ದಲಿತರು ಗ್ರಾಮದ ಮುಖ್ಯ ರಸ್ತೆಯಲ್ಲಿ ಶವಯಾತ್ರೆ ನಡೆಸಲು ಮುಂದಾಗಿದ್ದರು. ಈ ವೇಳೆ ಪ್ರಬಲ ಜಾತಿಯವರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

 

ಸಂಜೆ 4 ಗಂಟೆ ಸುಮಾರಿಗೆ ಗ್ರಾಮದ ಮುಖ್ಯರಸ್ತೆಯಲ್ಲಿ ಶವಯಾತ್ರೆ ನಡೆಸಲು ದಲಿತರು ನಿರ್ಧರಿಸಿದ್ದರು. ಆದರೆ ಪ್ರಬಲ ಜಾತಿಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಚಾಯಿತಿ ಅಧಿಕಾರಿಗಳಿಂದ ಮಾಹಿತಿ ಪಡೆದ ಪೊಲೀಸ್ ತಂಡ ಗ್ರಾಮಕ್ಕೆ ದೌಡಾಯಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆದಿದೆ ಎಂದು ವರದಿ ವಿವರಿಸಿದೆ.

 

ತಿರುವಣ್ಣಾಮಲೈನ ಕಂದಾಯ ವಿಭಾಗೀಯ ಅಧಿಕಾರಿ (ಆರ್‌ಡಿಒ) ಆರ್.ಮಂದಾಕಿನಿ ನೇತೃತ್ವದಲ್ಲಿ, ಕಂದಾಯ ಅಧಿಕಾರಿಗಳ ತಂಡವು ಗ್ರಾಮದಲ್ಲಿ ಪ್ರಬಲ ಜಾತಿ ಮತ್ತು ದಲಿತರ ನಡುವೆ ಶಾಂತಿ ಮಾತುಕತೆಗಳನ್ನು ಆಯೋಜಿಸಿತ್ತು.