ನಾಗೂರ(ಬಿ) ಉಪ ಕೇಂದ್ರ ಕಾಮಗಾರಿ ಸಂಪೂರ್ಣ ಕಳಪೆ ಶಾಸಕ ಪ್ರಭು ಚವ್ಹಾಣ ಆಕ್ರೋಶ

ಔರಾದ್ :  ಸಾರ್ವಜನಿಕರಿಂದ ನಿರಂತರ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಅ.17ರಂದು ಔರಾದ(ಬಿ) ತಾಲ್ಲೂಕಿನ ನಾಗೂರ(ಬಿ) ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ 220 ಕೆ.ವಿ ವಿದ್ಯುತ್ ಉಪ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಕಾಮಗಾರಿ ಕಳಪೆಯಾಗುತ್ತಿರುವುದನ್ನು ಕಂಡು ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.

ಉಪ ಕೇಂದ್ರದಲ್ಲಿ ಸಂಚರಿಸಿ ಕಾಂಪೌಂಡ್  ಗೋಡೆ, ಟ್ರಾನ್ಸ್ಫಾರ್ಮರ್ ಯಂತ್ರಗಳು ಹಾಗೂ ಕಟ್ಟಡ ಕೆಲಸ ಸೇರಿದಂತೆ ಕಾಮಗಾರಿಯ ಬಗ್ಗೆ ಅಧಿಕಾರಿಗಳಿಂದ ವಿವರಣೆ ಪಡೆದ ಶಾಸಕರು ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ಖುದ್ದು ಪರಿಶೀಲಿಸಿದರು. ನಿರ್ಮಾಣ ಹಂತದಲ್ಲಿರುವ ಕಂಪೌAಡ್ ಗೋಡೆಯಲ್ಲಿ ಸಿಮೆಂಟ್ ಎದ್ದು ಕಾಣುತ್ತಿರುವುದನ್ನು ಕಂಡು ಆಕ್ರೋಶಗೊಂಡರು. ಈ ಹಿಂದೆಯೂ ಕಳಪೆಯಾಗಿ ನಿರ್ಮಿಸಿದ್ದ ಒಂದು ಕಂಪೌAಡ್ ಗೋಡೆಯನ್ನು ಕೆಡವಿ ಪುನಃ ನಿರ್ಮಿಸಲಾಗುತ್ತಿದೆ. ಇದು ಕೂಡ ಕ್ಯೂರಿಂಗ್ ಆಗಿಲ್ಲ. ಆರಂಭದಲ್ಲಿಯೇ ಹೀಗಾದರೆ ಮುಂದಿನ ಗತಿಯೇನು ಎಂದು ಬೇಸರ ಹೊರಹಾಕಿದರು.

ಉಪ ಕೇಂದ್ರದ ಆವರಣದಲ್ಲಿ ನಿರ್ಮಿಸಲಾಗಿರುವ ಕಟ್ಟಡ ಕಾಮಗಾರಿ ವೀಕ್ಷಣೆ ವೇಳೆ ಗೋಡೆಯ ಬುನಾದಿಯಲ್ಲಿ ಕಲ್ಲು-ಮಣ್ಣು ಎದ್ದು ಕಾಣಿಸುತಿತ್ತು. ಗೋಡೆಗೆ ಕೈ ತಾಕಿದ ಕೂಡಲೇ ಮಣ್ಣು ಉದುರಲು ಆರಂಭಿಸಿತ್ತು. ಕಟ್ಟಡದ ಸುತ್ತಲೂ ಇದೇ ಪರಿಸ್ಥಿತಿ ಇರುವುದು ಕಂಡು ಶಾಸಕರು ಗುತ್ತಿಗೆದಾರರ ವಿರುದ್ಧ ಕೋಪಗೊಂಡರು. ಕೆಲಸ ಇಷ್ಟೊಂದು ಕಳಪೆಯಾಗುತ್ತಿದ್ದರೂ ಅಧಿಕಾರಿಗಳು ಏಕೆ ಕ್ರಮ ಕೈಗೊಂಡಿಲ್ಲವೆAದು ಪ್ರಶ್ನಿಸಿದರು.

ಉಪ ಕೇಂದ್ರದಲ್ಲಿ ಅಳವಡಿಸಲಾದ ಯಂತ್ರಗಳು, ವಿದ್ಯುತ್ ತಂತಿಗಳು ಹಾಗೂ ಮತ್ತಿತರೆ ಉಪಕರಣಗಳ ಬಗ್ಗೆಯೂ ದೂರುಗಳಿವೆ. ಇವು ಹಳೆಯದಾಗಿದ್ದು, ಬಣ್ಣ ಬಳಿದು ಹೊಸದಾಗಿ ಕಾಣುವಂತೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಕುರಿತು ತಜ್ಞರಿಂದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಇಂಜಿನೀಯರ್‌ಗೆ ದೂರವಾಣಿ ಮೂಲಕ ಸಂಪರ್ಕಿಸಿ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದರು. ನನ್ನ ಮತಕ್ಷೇತ್ರವಾದ ಔರಾದ(ಬಿ) ಜನತೆಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಸರ್ಕಾರದ ಮೇಲೆ ನಿರಂತರ ಒತ್ತಡ ತಂದು ಹಲವು ವರ್ಷ ಪ್ರಯತ್ನಪಟ್ಟು 118 ಕೋಟಿ ವೆಚ್ಚದಲ್ಲಿ ವಿದ್ಯುತ್ ಉಪ ಕೇಂದ್ರ ನಿರ್ಮಿಸಲಾಗುತ್ತಿದೆ. ಕೆಲಸ ಕಳಪೆಯಾಗುತ್ತಿದೆಯೆಂದು ಜನ ಆರೋಪಿಸುತ್ತಿದ್ದಾರೆ. ತಾವು ಒಂದು ಬಾರಿ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಬೇಕು ಎಂದು ತಿಳಿಸಿದರು.

ನಂತರ ಶಾಸಕರು ಮಾತನಾಡಿ, ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಸಣ್ಣ-ಪುಟ್ಟ ಕಾರ್ಖಾನೆಗಳನ್ನು ಸ್ಥಾಪಿಸಬೇಕೆಂಬುದು ಬಹುದಿನಗಳ ಅಕಾಂಕ್ಷೆಯಾಗಿದೆ. ಅದಕ್ಕೆ ಮುಖ್ಯವಾಗಿ ರಸ್ತೆ, ಕುಡಿಯುವ ನೀರು ಹಾಗೂ ವಿದ್ಯುತ್ ಪೂರೈಕೆ ಸಮರ್ಪಕವಾಗಿ ಕಲ್ಪಿಸಬೇಕು. ರಸ್ತೆ ಹಾಗೂ ಕುಡಿಯುವ ನೀರಿನ ಪೂರೈಕೆಗೆ ಯೋಜನೆಗಳನ್ನು ತರಲಾಗಿದ್ದು, ಈ ಕೆಲಸಗಳು ನಡೆಯುತ್ತಿವೆ. ವಿದ್ಯುತ್ ಕೊರತೆ ನೀಗಿಸಲು ಸರ್ಕಾರದಿಂದ 220 ಕೆ.ವಿ ವಿದ್ಯುತ್ ಉಪ ಕೇಂದ್ರವನ್ನು ಮಂಜೂರು ಮಾಡಿಸಿ ಕೆಲಸ ಆರಂಭಿಸಲಾಗಿದೆ. ಕಾಮಗಾರಿಯನ್ನು ಹೈದ್ರಾಬಾದ್ ಮೂಲದ ಸಂಸ್ಥೆಗೆ ವಹಿಸಲಾಗಿದೆ. ಅವರು ಇಲ್ಲಿಗೆ ಬರುವುದೇ ಇಲ್ಲ. ನೇರವಾಗಿ ಕೆಲಸ ಮಾಡದೇ 3ನೇ ವ್ಯಕಿಗಳಿಂದ ಕೆಲಸ ಮಾಡಿಸುತ್ತಿದ್ದಾರೆ ಎನ್ನುವ ಆರೋಪಗಳಿವೆ. ಹೀಗಾಗಿ ಕೆಲಸ ಸಂಪೂರ್ಣ ಕಳಪೆಯಾಗುತ್ತಿದೆ. ಬೃಹತ್ ಗಾತ್ರದ ಯಂತ್ರಗಳನ್ನು ರಾತ್ರೋರಾತ್ರಿ ಅಳವಡಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಕಟ್ಟಡಗಳು ಮತ್ತು ಕಂಪೌAಡ್ ಕಾಮಗಾರಿಯನ್ನು ವೀಕ್ಷಿಸಿದ್ದು, ಕೆಲಸ ಸಂಪೂರ್ಣ ಕಳಪೆಯಾಗಿದೆ. ಜನರಿಂದ ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ ಈ ಕುರಿತು ಈ ಹಿಂದೆ ಎರಡು ಬಾರಿ ಸಚಿವರು ಮತ್ತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಮಾಹಿತಿ ನೀಡಿದರು.

ನಾಗೂರ(ಬಿ) ವಿದ್ಯುತ್ ಉಪ ಕೇಂದ್ರದ ಕಾಮಗಾರಿಯ ಬಗ್ಗೆ 3ನೇ ಪಾರ್ಟಿಯಿಂದ ಸಮಗ್ರ ತನಿಖೆಯಾಗಬೇಕು. ಇದಕ್ಕೆ ಒಂದು ತಿಂಗಳ ಕಾಲಾವಕಾಶ ನೀಡುತ್ತೇನೆ. ಸರಿಪಡಿಸದೇ ಇದ್ದಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುತ್ತದೆ ಎಂದು ಶಾಸಕರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು, ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.

 

ವರದಿ : ರಾಚಯ್ಯ ಸ್ವಾಮಿ