ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ವಿಭಾಗೀಯ ಕೇಂದ್ರವಾದ ಕಲಬುರಗಿಗೆ ಚತುಷ್ಪಥ ಇರದಿರುವುದು ನಾಚಿಕೆಗೇಡು :ಅಪ್ಸರ್ ಕೊಡ್ಲಿಪೇಟೆ ಆರೋಪ

 

 

ಹುಮನಾಬಾದ :
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೀದರ್ ಜಿಲ್ಲೆಯ 2024-27 ರ ಅವಧಿಗೆ ನೂತನ ಅಧ್ಯಕ್ಷರಾಗಿ ಶೇಖ್ ಮಕ್ಸೂದ್, ಉಪಾಧ್ಯಕ್ಷರಾಗಿ ಮಹೇಬೂಬ್ ಪಾಷಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಮೊಹಮ್ಮದ್ ಮುಬ್ಬಶೀರ್ ಅಹಮದ್ ಮತ್ತು ಸೈಯದ್ ಹಫೀಜ್ ಇರ್ಫಾನ್ ಕಾರ್ಯದರ್ಶಿಯಾಗಿ ಸೈಯದ್ ಅಕ್ಬರ್ ಮತ್ತು ಸೈಯದ್ ತೌಹೀದ್ ಖಾದ್ರಿ ಕೋಶಾಧಿಕಾರಿಯಾಗಿ ಎಂ ಡಿ ಅಯ್ಯೂಬ್ ಹಾಗೂ ಸಮಿತಿ ಸದಸ್ಯರುಗಳಾಗಿ ಸೈಯದ್ ಇಬ್ರಾಹಿಂ , ಮೊಹಮ್ಮದ್ ಮೌಸೀನ್, ಸೈಯದ್ ಇಸ್ಮಾಯಿಲ್ ಮೀರ್ ,ಶೈಖ್ ಇರ್ಫಾನ್ ರವರು ಆಯ್ಕೆಯಾಗಿದ್ದಾರೆ.
ಜಿಲ್ಲಾ ಸಮಿತಿಯ ಚುನಾವಣಾ ಪ್ರಕ್ರಿಯೆಯನ್ನು, ಎಸ್‌ಡಿ ಪಿಐ ರಾಜ್ಯ ನಾಯಕರಾದ ಡಾ. ರಿಜ್ವಾನ್ ರವರು ನಡೆಸಿಕೊಟ್ಟರು.

ಜಿಲ್ಲಾ ಪ್ರತಿನಿಧಿ ಸಭೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆಫ್ಸರ್ ಕೊಡ್ಲಿಪೇಟೆ ರವರು ಉದ್ಘಾಟಿಸಿದರು.

ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಆಫ್ಸರ್ ಕೊಡ್ಲಿಪೇಟೆ ರವರು ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ವಿಭಾಗೀಯ ಕೇಂದ್ರವಾದ ಕಲಬುರಗಿಗೆ ಚತುಷ್ಪಥ ಇರದಿರುವುದು ನಾಚಿಕೆಗೇಡು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಲ್ಯಾಣ ಪಥ ಬೇಡಿಕೆ ಈಡೇರಿಸುವುದರಿಂದ ರಸ್ತೆ ಸಂಪರ್ಕದಲ್ಲಿಕ್ರಾಂತಿ ಆಗಲಿದೆ.

ಯಾವುದೇ ಜಿಲ್ಲೆಗಳು ಮುಂದುವರಿಯಬೇಕಾದರೆ ಆ ಜಿಲ್ಲೆಯಲ್ಲಿ ಮೊದಲು ರಸ್ತೆ ಸಂಪರ್ಕ, ರೈಲ್ವೆ ಸಂಪರ್ಕ ಹಾಗೂ ವಿಮಾನ ಸೇವೆ ಅತಿ ಅವಶ್ಯ. ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸಲು ಚತುಷ್ಪಥಗಳೇ ಇಲ್ಲ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಪ್ರಮುಖವಾಗಿ ಚತುಷ್ಪಥ ಗ್ರೀನ್‌ಫೀಲ್ಡ್‌ ಅತ್ಯಂತ ಅವಶ್ಯವಿದ್ದರೂ ಕೇಂದ್ರ ಸರಕಾರ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ರಾಜ್ಯ ಸರಕಾರವೂ ಕೇಂದ್ರದ ಮೇಲೆ ಒತ್ತಡ ಹೇರುತ್ತಿಲ್ಲ. ಇದರಿಂದ ಈ ಚತುಷ್ಪಥ ಗ್ರೀನ್‌ಫೀಲ್ಡ್‌ ಯೋಜನೆ ನನೆಗುದಿಗೆ ಬಿದ್ದಿದೆ.
ಇಡೀ ಕರ್ನಾಟಕವನ್ನು ಬೆಸೆಯುವ ಉತ್ತರದಿಂದ ದಕ್ಷಿಣ ಕರ್ನಾಟಕ ಸಂಪರ್ಕ ಕಲ್ಪಿಸುವ ಬೀದರ್‌ ಚಾಮರಾಜನಗರ (ವಯಾ ಕಲಬುರಗಿ) ಹೆದ್ದಾರಿ ಚತುಷ್ಪಥ (150ಎ) ಆಗಬೇಕೆಂಬ ಬೇಡಿಕೆ ಕನಸಾಗಿಯೇ ಉಳಿದಿದೆ. ಕೇಂದ್ರಮತ್ತು ರಾಜ್ಯ ಸರಕಾರಗಳು ಈ ಬೇಡಿಕೆಗೆ ಸ್ಪಂದಿಸದೇ ಇರುವುದರಿಂದ ಜನರಲ್ಲಿ ಅಸಮಾಧಾನವೂ ಇದೆ.
ಬೀದರ್ ಜಿಲ್ಲೆಯ ತಾಲೂಕಗಳ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಮತ್ತು ಅಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವುದು ಸರ್ಕಾರದ ಆಡಳಿತಕ್ಕೆ ಹಿಡಿದ ಕನ್ನಡಿ ಆಗಿದೆ.

ಕಲ್ಯಾಣ ಕರ್ನಾಟಕ ಭಾಗದ ಮೂಲ ಸೌಕರ್ಯ ಅಭಿವೃದ್ಧಿ ಸರ್ಕಾರ ಮೊದಲ ಆದ್ಯತೆ ನೀಡುವಂತೆ ಅವರು ಆಗ್ರಹಿಸಿದರು.

ಜಿಲ್ಲಾ ಪ್ರತಿನಿಧಿ ಸಭೆಯಲ್ಲಿ ಪಕ್ಷದ ಕಳೆದ ಒಂದುವರೆ ವರ್ಷಗಳ ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಿ ಅಗತ್ಯ ಸಲಹೆಗಳನ್ನು ಪರಿಗಣಿಸಿ ಅನುಮೋದನೆ ನೀಡಲಾಯಿತು. ಬೀದರ್ ಜಿಲ್ಲೆಯ ರಾಜಕೀಯ ವಿದ್ಯಮಾನಗಳ ಚರ್ಚೆ ನಡೆಸಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಿಷ್ಠಗೊಳಿಸಲು ಚರ್ಚೆ ನಡೆಸಲಾಯಿತು.

error: Content is protected !!