ದಾವಣಗೆರೆ: ತಾಕತ್ತಿದ್ದರೆ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಇಳಿಸಲಿ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಬಸನಗೌಡ ಪಾಟೀಲ ಯತ್ನಾಳ್ ಮತ್ತು ರಮೇಶ ಜಾರಕಿಹೊಳಿಗೆ ನೇರ ಸವಾಲು ಹಾಕಿದ್ದಾರೆ
ಗುರುವಾರ (ಜ.16) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ. ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದೂ ಕೂಡಾ ಅಷ್ಟೇ ಸತ್ಯ. ಯತ್ನಾಳ್, ರಮೇಶ್ ಜಾರಕಿಹೊಳಿಗೆ ತಾಕತ್ತಿದ್ದರೆ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಲಿ ನೋಡೋಣ ಎಂದರು.
ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದ ಬಿ.ಎಸ್.ಯಡಿಯೂರಪ್ಪ ಬಗ್ಗೆ ಮಾತನಾಡಿದರೆ ಸಹಿಸುವುದಿಲ್ಲ. ವಿಜಯೇಂದ್ರಗೆ ರಾಜ್ಯಾಧ್ಯಕ್ಷನಾಗಿ ಮಾಡಿರುವುದು ಯಡಿಯೂರಪ್ಪನವರ ಮಗ ಎನ್ನುವ ಕಾರಣಕ್ಕೆ ಅಲ್ಲ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಂತೋಷ್ ಅವರು ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ ಹೊರತು. ನಾನು, ನೀವುಗಳಲ್ಲ ಎಂದರು.
ನಿಮ್ಮಂತಹ ನೂರು ಜನ ಬಂದರೂ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಲ್ಲ. 17 ಜನ ಕರೆ ಮಾಡಿದ್ದರು ಎಂದು ಯಾರೋ ಮಹಾನ್ ನಾಯಕ ಹೇಳಿದ್ದಾನೆ. ನೀನು ಯಾವ ಸೀಮೆ ದೊಣ್ಣೆ ನಾಯಕ ಅಂತ ಹೇಳ್ತಿಯಾ, ನಿನಗೆ ಯಾರು ಕರೆ ಮಾಡಿದ್ದರು, ನೀನು ಯಾವ ದೊಣ್ಣೆ ನಾಯಕ ಅಂತಾ ಅನುಮತಿ ಪಡೆಯಬೇಕಾ. ವಕ್ಫ್ ಎಂದು ಕೂಗಿಗೊಳ್ಳುವ ನಿಮ್ಮಂತಹ ಮೂರ್ನಾಲ್ಕು ಜನರಿಗೆ ಪಕ್ಷದ ಹೆಸರಿನಲ್ಲಿ ಬಂಡಾಯ ಮಾಡುತ್ತಿದ್ದೀರಲ್ಲ ನಾಚಿಕೆ ಆಗುವುದಿಲ್ಲವೇ ಎಂದು ಯತ್ನಾಳ್ ತಂಡದ ವಿರುದ್ಧ ಹರಿಹಾಯ್ದರು.