ನಾಡು- ನುಡಿ ನೆಲ-ಜಲ ಕಲೆ, ಸಾಹಿತ್ಯ ,ಸಂಸ್ಜೃತಿ ಸೇರಿದಂತೆ ಕನ್ನಡಿಗರ ಸಾಂಸ್ಕೃತಿಕ ಬದುಕಿನ ಸಂವರ್ಧನೆಗಾಗಿ ಜನ್ಮ ತಳೆದ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಲು ಚಿಟಗುಪ್ಪ ತಾಲ್ಲೂಕಿನ ಕಸಾಪದ ನೂತನ ಅಧ್ಯಕ್ಷರನ್ನಾಗಿ ಅನೀಲಕುಮಾರ ಶಿಂಧೆ ಅವರನ್ನು ನೇಮಿಸಲಾಗಿದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ತಿಳಿಸಿದ್ದಾರೆ
ಈ ಹಿಂದೆ ತಾಲ್ಲುಕು ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಶ್ರೀ ರಮೇಶ ಸಲಗರ ಅವರು ತಮ್ಮ ವೈಯಕ್ತಿಕ ಕಾರಣದಿಂದ ಕಸಾಪ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುತ್ತಾರೆ. ಶ್ರೀ ರಮೇಶ ಸಲಗರ ಅವರು ತಮ್ಮ ಅವಧಿಯಲ್ಲಿ ಕ್ರಿಯಾಶೀಲರಾಗಿ ತಾಲ್ಲೂಕು ಸಮ್ಮೇಳನ ಶಾಲಾ ಕಾಲೇಜುಗಳಲ್ಲಿ ಕನ್ನಡ ಕಾರ್ಯಕ್ರಮ, ಕವಿ ಸಾಹಿತಿಗಳ ಸ್ಮರಣೆ , ಪ್ರತಿಭಾ ಪುರಸ್ಕಾರ , ಮನೆಗಳಲ್ಲಿ ಸಾಹಿತ್ಯ ಜ್ಯೋತಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿರುತ್ತಾರೆ. ಹೀಗಾಗಿ ಅವರಿಂದ ತೆರವಾದ ಸ್ಥಾನಕ್ಕೆ ಉಳಿದ ಅವಧಿಗೆ ಅನೀಲಕುಮಾರ ಶಿಂಧೆ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಉಪನ್ಯಾಸಕರಾಗಿರುವ ಶಿಂಧೆ ಅವರು ಎರಡು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದು ಈ ಹಿಂದೆ ವಲಯ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.