ಉಚ್ಚ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದ ಕೆ.ಆರ್.ಎಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

KRS ಪಕ್ಷದ ಬೆಂಗಳೂರು (ಸಂಘಟನಾ) ಪಶ್ಚಿಮ ಜಿಲ್ಲೆಯ ಅಧ್ಯಕ್ಷರಾದ ಅಮಿತ್ ರೆಬೊಲ್ಲೊ ರವರು ದಿನಾಂಕ:-30.09.2025 ರಂದು ಫ್ರೀಡಂ ಪಾರ್ಕ್‌ನಲ್ಲಿ “ಪ್ರಜಾ ಹಕ್ಕುಗಳು ಮತ್ತು ಪ್ರಜಾ ಪ್ರಭುತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಫ್ರೀಡಂಪಾರ್ಕ್‌ನಲ್ಲಿ ಶಾಂತಿಯುತ ಪ್ರತಿಭಟನೆ” ಎಂಬ ವಿಷಯ ನಮೂದಿಸಿ ಪಿ.ಐ ಉಪ್ಪಾರಪೇಟೆ ಪೊಲೀಸ್ ಠಾಣೆ ರವರಿಗೆ ಅನುಮತಿ ನೀಡಲು ಕೋರಿದ್ದರು.

ಅದೇ ದಿನ ದಿನಾಂಕ:-29.09.2025 ರಂದು ಉಪ್ಪಾರಪೇಟೆ ಪೊಲೀಸ್ ಠಾಣೆಯ ಪಿ.ಐ ರವರು ದಿನಾಂಕ:30/09/2025 ರಂದು ಫ್ರೀಡಂ ಪಾರ್ಕ್‌ನಲ್ಲಿ 2 ಪ್ರತಿಭಟನೆಗಳಿಗೆ ಈ ಹಿಂದೆಯೆ ಅನುಮತಿ ನೀಡಿದ್ದ ಕಾರಣ, KRS ಪಕ್ಷದ ಪದಾಧಿಕಾರಿಗಳು ಅನುಮತಿ ಕೇಳಲಾಗಿದ್ದ ವಿಷಯವು ಪ್ರತಿಭಟನೆ/ಹೋರಾಟಕ್ಕೆ ಸಂಬಂಧಪಟ್ಟಿಲ್ಲದ್ದರಿಂದ ಪಿ.ಐ. ಉಪ್ಪಾರಪೇಟೆ ಪೊಲೀಸ್ ಠಾಣೆ ರವರು ನಿಯಮಾನುಸಾರ ಆಗುವುದಿಲ್ಲ ಎಂದು ಅನುಮತಿ ನಿರಾಕರಿಸಿದರು ಹಾಗೂ ಉಚ್ಚನ್ಯಾಯಾಲಯದ ಆದೇಶದಲ್ಲಿ ಬೆಂಗಳೂರು ನಗರದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಬಿಟ್ಟು ಯಾವುದೇ ಸ್ಥಳದಲ್ಲಿ ಪ್ರತಿಭಟನೆ. ಧರಣಿ & ಮುಷ್ಕರಗಳನ್ನು ನಡೆಸಬಾರದೆಂದು ಆದೇಶ ನೀಡಿರುವುದನ್ನು ಅವರಿಗೆ ಮನವರಿಕೆ ಮಾಡಿ ತಿಳುವಳಿಕೆ ಪತ್ರವನ್ನು ಜಾರಿ ಮಾಡಿದರು ಎನ್ನಲಾಗಿದೆ,

ಆದರೂ ಕೂಡ ಉದ್ದೇಶ ಪೂರ್ವಕವಾಗಿ ಕೆ.ಆರ್.ಎಸ್ ಪಕ್ಷದ ಪದಾಧಿಕಾರಿಗಳು ಉಚ್ಚ ನ್ಯಾಯಾಲಯದ ಆದೇಶಕ್ಕೆ ಗೌರವ ನೀಡದೆ ಮತ್ತು ಪೊಲೀಸರು ನೀಡಿರುವ ಸೂಚನೆಗಳನ್ನು ಉಲ್ಲಂಘಿಸಿ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ಮಾಡುವ ಬಗ್ಗೆ ಕೆ.ಆರ್.ಎಸ್ ಪಕ್ಷದ FACEBOOK, ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಅವರ ಕಾರ್ಯಕರ್ತರನ್ನು ಪ್ರಚೋದಿಸಿ ದಿನಾಂಕ:-30-09-2025 ರಂದು ಫ್ರೀಡಂ ಪಾರ್ಕ್ ಗೆ ಬರುವಂತೆ ಸಂದೇಶಗಳನ್ನು, ವಿಡಿಯೋಗಳನ್ನು ಹಂಚಿಕೊಂಡಿರುತ್ತಾರೆ.

ಉಚ್ಚ ನ್ಯಾಯಾಲಯದ ಆದೇಶದಲ್ಲಿ ತಿಳಿಸಿರುವಂತೆ ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ ನಲ್ಲಿ ಬಿಟ್ಟು ಬೇರೆ ಕಡೆ ಯಾವುದೇ ಪ್ರತಿಭಟನೆ, ಪ್ರತಿಭಟನಾ ಮೆರವಣಿಗೆ, ಧರಣಿ ಮಾಡಬಾರದೆಂದು ಆದೇಶ ಇದ್ದರೂ ಸಹ ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿ ದಿನಾಂಕ:-30.09.2025 ರಂದು ಗಾಂಧಿನಗರದ 6ನೇ & 2ನೇ ಮುಖ್ಯ ರಸ್ತೆಗಳಲ್ಲಿ ಸುಮಾರು 60-70 ಜನ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆಯನ್ನು ಮಾಡುತ್ತಿದ್ದು ಕಂಡು ಬಂದ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕ ಸುಗಮ ಸಂಚಾರ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ ಹಾಗೂ ಇವರುಗಳನ್ನು ದಸ್ತಗಿರಿ ಮಾಡಿ ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಿರುತ್ತದೆ.

ಜಾಮೀನಿನ ಮೇಲೆ ಬಿಡುಗಡೆಗೊಂಡ ನಂತರವು ಪ್ರಕರಣ ದಾಖಲಾದ ತನಿಖೆಯ ಬಗ್ಗೆ ಹಾಗೂ ತನಿಖೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳಿಗೆ ಪ್ರಾಣ ಬೆದರಿಕೆ ಹಾಕಿರುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುವುದು ಮುಂದುವರೆಸಿರುತ್ತಾರೆ ಎಂದು ಈ ಬಗ್ಗೆ ಹೆಚ್ಚುವರಿಯಾಗಿ ಸೂಕ್ತ ಕಲಂಗಳನ್ನು ಅಳವಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರ ಕಚೇರಿಯಿಂದ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ವರದಿ : ಮುಬಾರಕ್ ಬೆಂಗಳೂರು

error: Content is protected !!