ಪರಿಶಿಷ್ಟರ ಒಳಮೀಸಲಾತಿ ವರ್ಗೀಕರಣಕ್ಕೆ ರಾಜ್ಯಗಳಿಗೆ ಅಧಿಕಾರ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿರುವ ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ನಿಲುವನ್ನು ರಾಜ್ಯ ನಾಯಕರು ವಿರೋಧಿಸಿ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಸಂಯೋಜಕ ಎಂ. ಗೋಪಿನಾಥ್ ಸೇರಿದಂತೆ 5 ಮಂದಿ ಪದಾಧಿಕಾರಿಗಳು ಬಿಎಸ್‌ಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಮಾಹಿತಿ ನೀಡಿದರು.
ಈ ಕುರಿತು ಮಾತನಾಡಿದ ಮಾರಸಂದ್ರ ಮುನಿಯಪ್ಪ, “ಬಹುಜನ ಸಮಾಜ ಪಕ್ಷವು (ಬಿಎಸ್‌ಪಿ) ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಕಾನ್ಶಿರಾಮ್ ಸಿದ್ದಾಂತದಿಂದ ದೂರ ಸರಿದಿದೆ; ಪಕ್ಷವು ತನ್ನ ಪ್ರಜಾಸತ್ತಾತ್ಮಕ ಸ್ವರೂಪವನ್ನು ಕಳೆದುಕೊಂಡಿರುವುದರಿಂದಲೇ ರಾಜ್ಯ ಸಮಿತಿಯ ಪದಾಧಿಕಾರಿಗಳು ಪಕ್ಷವನ್ನು ತೊರೆಯಲು ನಿರ್ಧರಿಸಿದ್ದೇವೆ” ಮಾಯಾವತಿ ಅವರ ನಾಯಕತ್ವದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
“ಎಸ್‍ಸಿ-ಎಸ್‍ಟಿ ಮೀಸಲಾತಿ ವಿಚಾರದಲ್ಲಿ ಮಧ್ಯಪ್ರವೇಶಿಸಲು ರಾಜ್ಯ ಸರಕಾರಕ್ಕೆ ಅಧಿಕಾರ ಇಲ್ಲ. ಮೀಸಲಾತಿ ಕೆನೆಪದರ ವಿಷಯವನ್ನು ವಿರೋಧಿಸಿರುವ ಮಾಯಾವತಿ ನಿಲುವನ್ನು ನಾವು ಅನುಮೋದಿಸುತ್ತೇವೆ. ಆದರೆ, ಒಳಮೀಸಲಾತಿ ವಿರೋಧಿಸುವ ಅವರ ತೀರ್ಮಾನದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದೇವೆ. 30 ವರ್ಷಗಳಿಂದ ಒಳಮೀಸಲಾತಿ ಆಂದೋಲನವನ್ನು ನಾವು ಮತ್ತು ನಮ್ಮ ಕಾರ್ಯಕರ್ತರು ಬೆಂಬಲಿಸುತ್ತಾ ಬಂದಿದ್ದೇವೆ” ಎಂದು ಹೇಳಿದರು.
“ರಾಜ್ಯದ ಮೀಸಲಾತಿ ಸ್ಥಿತಿಯ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರಾದ ಮಾಯಾವತಿ ಅವರೊಂದಿಗೆ ಮಾತನಾಡಲು ರಾಜ್ಯ ಉಸ್ತುವಾರಿ ಡಾ.ಅಶೋಕ್ ಸಿದ್ಧಾರ್ಥ್ ಮೂಲಕ ಮನವಿಯನ್ನು ಸಲ್ಲಿಸಿದೆವು. ಅಲ್ಲದೆ ಆ.9ರಂದು ಅವರೊಂದಿಗೆ ಫೋನ್ ಮೂಲಕ ನಮ್ಮ ಅಹವಾಲನ್ನು ಹೇಳಿಕೊಂಡಿದ್ದೇವೆ. ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ನೀಡಿ ಒಳಮೀಸಲಾತಿ ಒದಗಿಸುವಂತೆ ನ್ಯಾ.ಸದಾಶಿವ ಆಯೋಗದ ಶಿಫಾರಸ್ಸುಗಳು ಸಾಮಾಜಿಕ ನ್ಯಾಯ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾದ ತತ್ವಗಳ ಪ್ರಕಾರವಾಗಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದೆವು” ಎಂದು ಅವರು ವಿವರಿಸಿದರು.
“ಮಾಯಾವತಿ ಅವರ ಆಹ್ವಾನದ ಮೇರೆಗೆ ರಾಜ್ಯ ಪದಾಧಿಕಾರಿಗಳ ನಿಯೋಗವು ಆ.27ರಂದು ತೆರಳಿತ್ತು. ಆದರೆ, ಅವರನ್ನು ನೇರವಾಗಿ ಭೇಟಿಯಾಗಿ ಮನವಿಯನ್ನು ಸಲ್ಲಿಸಲು ಅವಕಾಶ ಮಾಡಿಕೊಡಲಿಲ್ಲ. ನಮ್ಮಂತೆಯೆ ಆಂಧ್ರಪ್ರದೇಶ ಮತ್ತು ತೆಲಂಗಾಣ ನಾಯಕರೂ ತಮ್ಮ ಮನವಿಯನ್ನು ಸಲ್ಲಿಸಲಾಗದೆ ಅವಮಾನ ಅನುಭವಿಸಿದ್ದಾರೆ” ಎಂದು ಮುನಿಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
“ರಾಜೀನಾಮೆಯ ನಂತರದಲ್ಲಿ ನಾವು ಸುಮ್ಮನೆ ಕೂರದೆ, ಫುಲೆ, ಪೆರಿಯಾರ್, ನಾರಾಯಣಗುರು, ಅಂಬೇಡ್ಕರ್ ಮತ್ತು ಕಾನ್ಶಿರಾಮ್ ಆದರ್ಶಗಳ ಮೇಲೆ ಬಹುಜನ ಚಳುವಳಿ ಮುಂದುವರಿಸಲು ಸಂಕಲ್ಪ ಮಾಡಿದ್ದೇವೆ” ಎಂದು ಮಾರಸಂದ್ರ ಮುನಿಯಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜೀನಾಮೆ ನೀಡಿದ ರಾಜ್ಯ ಸಂಯೋಜಕ ಎಂ.ಗೋಪಿನಾಥ್, ಪ್ರಧಾನ ಕಾರ್ಯದರ್ಶಿಗಳಾದ ಆರ್.ಮುನಿಯಪ್ಪ ಮತ್ತು ಕೆ.ಬಿ.ವಾಸು ಉಪಸ್ಥಿತರಿದ್ದರು.