ಸ್ಪೀಡ್ ಬ್ರೇಕರ್ ಗಮನಿಸದ ಕಾರಣ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು 24 ವರ್ಷದ ಯುವಕ ಸಾವನ್ನಪ್ಪಿದ ದುರ್ಘಟನೆ ದಪ್ಪರ್ತಿ ಕ್ರಾಸ್ ಬಳಿ ನಡೆದಿದೆ.
ಗುಡಿಬಂಡೆ ತಾಲ್ಲೂಕಿನ ದಪ್ಪರ್ತಿ ಕ್ರಾಸ್ ಬಳಿ ಇಂದು ನಡೆದ ರಸ್ತೆ ಅಪಘಾತದಲ್ಲಿ 24 ವರ್ಷದ ಯುವಕ ನವೀನ್ ಕುಮಾರ್ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಗವಿಕುಂಟಹಳ್ಳಿ ಗ್ರಾಮದ ನಿವಾಸಿಯಾಗಿದ್ದ ನವೀನ್ ಕುಮಾರ್ ಧರ್ಮಸ್ಥಳ ಸಂಘದಲ್ಲಿ ಕಳೆದ ಐದು ವರ್ಷಗಳಿಂದ ಗಣಕಯಂತ್ರ ಸಂಬಂಧಿತ ಕೆಲಸ ಮಾಡುತ್ತಿದ್ದರು.
ಇಂದು ಬೆಳಗ್ಗೆ ಎಂದಿನಂತೆ ತಮ್ಮ ಕೆಲಸಗಳನ್ನು ಮುಗಿಸಿಕೊಂಡು, “ನಾನು ಕೆಲಸಕ್ಕೆ ಹೋಗುತ್ತಿದ್ದೇನೆ” ಎಂದು ಪೋಷಕರಿಗೆ ತಿಳಿಸಿ ಸುಮಾರು 10:30ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ದಪ್ಪರ್ತಿ ಕ್ರಾಸ್ ಬಳಿ ಅಪಘಾತಗಳನ್ನು ತಡೆಯಲು ಹಾಕಿದ್ದ ಸ್ಪೀಡ್ ಬ್ರೇಕರ್ ಗಮನಿಸದೆ ವೇಗದಲ್ಲಿ ಸಾಗುತ್ತಿದ್ದ ವೇಳೆ ವಾಹನದ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಅಪಘಾತದ ಪರಿಣಾಮ ತಲೆಗೆ ಮತ್ತು ಮೂಗಿಗೆ ಗಂಭೀರ ಪೆಟ್ಟು ಬಿದ್ದು ಹೆಚ್ಚಿನ ರಕ್ತಸ್ರಾವವಾಗಿದ್ದು, ನವೀನ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಗಮನಿಸಿದ ಸಾರ್ವಜನಿಕರು ತಕ್ಷಣವೇ ಅವರನ್ನು ಗುಡಿಬಂಡೆ ತಾಲ್ಲೂಕು ಆಸ್ಪತ್ರೆಗೆ ಸಾಗಿಸಿದರೂ, ವೈದ್ಯರು ಅವರನ್ನು ಮೃತರೆಂದು ಘೋಷಿಸಿದರು.
ಈ ದುರಂತ ಸುದ್ದಿ ತಿಳಿದ ಕುಟುಂಬಸ್ಥರು ಮತ್ತು ಬಂಧುಬಳಗ ದುಃಖಕ್ಕೆ ಒಳಗಾಗಿದ್ದಾರೆ. ಸ್ಥಳಕ್ಕೆ ಗುಡಿಬಂಡೆ ಠಾಣೆ ಪೊಲೀಸರು ಬೇಟಿ ನೀಡಿ ಪರಿಶೀಲನೆ .ಮುಂದುವರಿಸಿದ್ದಾರೆ.
ವರದಿ:
ಜೆ ಎನ್ ಕೃಷ್ಣಾರೆಡ್ಡಿ
ಚಿಕ್ಕಬಳ್ಳಾಪುರ
