ಬೆಂಗಳೂರು: ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದ ಸಾಮಾನ್ಯ ಜನರಿಗೆ ಈಗ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಇತ್ತೀಚೆಗಷ್ಟೇ ವಾಣಿಜ್ಯ ಹಾಗೂ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿ ತತ್ತರಿಸಿದ್ದ ಸಾರ್ವಜನಿಕರಿಗೆ, ಈಗ ದೈನಂದಿನ ಆಹಾರದ ಪ್ರಮುಖ ಆಧಾರವಾಗಿರುವ ಅಕ್ಕಿಯ ಬೆಲೆಯೂ ಸಹ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೆಜಿಗೆ ₹5 ರಿಂದ ₹10 ರಷ್ಟು ಭಾರಿ ಏರಿಕೆ!
ಕಳೆದ ಒಂದು ವಾರದಿಂದ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಸದ್ದಿಲ್ಲದೆ ಗಗನಕ್ಕೇರುತ್ತಿದೆ. ಪ್ರಮುಖವಾಗಿ ಸಾರ್ವಜನಿಕರು ಅತಿ ಹೆಚ್ಚು ಬಳಸುವ ಸೋನಾ ಮಸೂರಿ, ಸ್ಟೀಮ್ ರೈಸ್ ಹಾಗೂ ಬುಲೆಟ್ ಅಕ್ಕಿಯ ಬೆಲೆಯಲ್ಲಿ ಪ್ರತಿ ಕೆಜಿಗೆ ಬರೋಬ್ಬರಿ 5 ರಿಂದ 10 ರೂಪಾಯಿಗಳವರೆಗೆ ಹೆಚ್ಚಳವಾಗಿದೆ.
ಮುಂಚೆ ಕ್ವಿಂಟಾಲ್ಗೆ ₹5,000 ರಿಂದ ₹5,500 ಇದ್ದ ಉತ್ತಮ ತಳಿಯ ಸೋನಾ ಮಸೂರಿ ಅಕ್ಕಿಯ ಬೆಲೆ ಈಗ ₹6,000 ಗಡಿ ದಾಟಿದೆ.
25 ಕೆಜಿಯ ಒಂದು ಅಕ್ಕಿ ಚೀಲದ ಮೇಲೆ ಸಗಟು ಮಾರುಕಟ್ಟೆಯಲ್ಲೇ ₹150 ರಿಂದ ₹250 ರವರೆಗೆ ಬೆಲೆ ಜಾಸ್ತಿಯಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.
ಬೆಲೆ ಏರಿಕೆಗೆ ಕಾರಣವೇನು?
ಮಾರುಕಟ್ಟೆ ತಜ್ಞರ ಪ್ರಕಾರ, ಈ ಬಾರಿ ಮುಂಗಾರು ಮಳೆಯ ಆರಂಭದಲ್ಲಿ ಉಂಟಾದ ಏರುಪೇರು ಮತ್ತು ಪ್ರಮುಖ ಭತ್ತ ಬೆಳೆಯುವ ಜಿಲ್ಲೆಗಳಲ್ಲಿ ನೀರಿನ ಕೊರತೆಯಿಂದಾಗಿ ಭತ್ತದ ಇಳುವರಿ ಕಡಿಮೆಯಾಗಿದೆ. ಇದರೊಂದಿಗೆ ಮಿಲ್ ಮಾಲೀಕರು ಹಾಗೂ ಸಗಟು ವ್ಯಾಪಾರಿಗಳ ಬಳಿ ಭತ್ತದ ದಾಸ್ತಾನು ಕೊರತೆ ಎದುರಾಗಿರುವುದು ಈ ದಿಢೀರ್ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಕಣ್ಣೀರು ಹಾಕುತ್ತಿರುವ ಗೃಹಿಣಿಯರು, ಹೋಟೆಲ್ ಮಾಲೀಕರು:
ಒಂದೆಡೆ ಗ್ಯಾಸ್ ಸಿಲಿಂಡರ್ ಬೆಲೆ ಕೈ ಸುಡುತ್ತಿದ್ದರೆ, ಮತ್ತೊಂದೆಡೆ ಅಕ್ಕಿ ಬೆಲೆಯೂ ದುಬಾರಿಯಾಗಿರುವುದು ಮಧ್ಯಮ ಮತ್ತು ಬಡ ವರ್ಗದವರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. “ಗ್ಯಾಸ್ ಹಚ್ಚಲು ಹಣ ಬೇಕು, ಇನ್ನು ಒಳಗೆ ಅಕ್ಕಿ ಹಾಕಿ ಅನ್ನ ಮಾಡಲು ಹೋದರೆ ಅಕ್ಕಿಗೂ ಚಿನ್ನದ ಬೆಲೆ ಬಂದಿದೆ. ನಾವು ಜೀವನ ಮಾಡುವುದಾದರೂ ಹೇಗೆ?” ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.ಮತ್ತೊಂದೆಡೆ ಹೋಟೆಲ್ ಮತ್ತು ಖಾನಾವಳಿ ಮಾಲೀಕರು ಕೂಡ ಅಕ್ಕಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದು, ಮುಂಬರುವ ದಿನಗಳಲ್ಲಿ ಟಿಫನ್ ಹಾಗೂ ಊಟದ ದರವನ್ನು ಹೆಚ್ಚಿಸಲು ಪ್ಲಾನ್ ಮಾಡುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಜನಸಾಮಾನ್ಯರ ಬದುಕು ಮತ್ತಷ್ಟು ದುಸ್ತರವಾಗುವುದರಲ್ಲಿ ಸಂಶಯವಿಲ್ಲ.
ವರದಿ: ನಾಗರಾಜ್ (ಕೆ.ಕಲ್ಲಹಳ್ಳಿ)
