ತಲಘಟ್ಟಪುರ ಪೊಲೀಸ್ ಠಾಣೆಯ ಸರಹದ್ದಿನ ವರಹಾಸಂದ್ರದಲ್ಲಿ ವಾಸವಿರುವ ಪಿರಾದುದಾರರು ದಿನಾಂಕ 2:21/03/2026 ರಂದು ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರ್ಯಾದುದಾರರು ದಿನಾಂಕ:20/03/2026 ರಂದು ರಾತ್ರಿ ಯಲ್ಲಮ್ಮ ದೇವಸ್ಥಾನದ ಪಕ್ಕದಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಹೋಗಿರುತ್ತಾರೆ. ವಾಪಸ್ ಬಂದು ನೋಡಲಾಗಿ ಯಾರೋ ಕಳ್ಳರು ದ್ವಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿರುತ್ತಾರೆ. ಈ ಕುರಿತು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದ್ವಿ ಚಕ್ರ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಭಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ ದಿನಾಂಕ:16/04/2026 ರಂದು ನೈಸ್ ರಸ್ತೆಯ ಬಳಿ ಒಂದು ದ್ವಿಚಕ್ರ ವಾಹನ ಸಮೇತ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳಿಬ್ಬರನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ದ್ವಿಚಕ್ರ ವಾಹನವನ್ನು ಕಳವು ಮಾಡಿರುವುದಾಗಿ ತಷ್ಟೊಪ್ಪಿಕೊಂಡಿರುತ್ತಾರೆ ಹಾಗೂ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ.
ಆರೋಪಿಗಳು ಕಳವು ಮಾಡಿದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಸಲುವಾಗಿ ಠಾಣಾ ಸರಹದ್ದಿನ ಪೈಪ್‌ಲೇನ್ ರಸ್ತೆಯಲ್ಲಿರುವ ಮಾವಿನ ತೋಪು ಬಳಿ, ರಾಜಹಂಸ ಗಾರ್ಡನ್ ಪಕ್ಕದ ಖಾಲಿ ಜಾಗದಲ್ಲಿ ಹಾಗೂ ನಾಗೇಗೌಡನಪಾಳ್ಯದ ಬಿಡಿಎ ಸೈಟ್‌ನಲ್ಲಿ ನಿಲ್ಲಿಸಿರುವುದಾಗಿ ತಿಳಿಸಿದ್ದು, ಅವರುಗಳು ನೀಡಿದ ಮಾಹಿತಿಯ ಮೇರೆಗೆ ಆ ಸ್ಥಳಗಳಿಂದ 19 ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಇವುಗಳ ಒಟ್ಟು ಮೌಲ್ಯ ₹15,00,000/- (ಹದಿನೈದು ಲಕ್ಷ ರೂಪಾಯಿ).
ಈ ಪ್ರಕರಣದ ಆರೋಪಿಗಳಿಬ್ಬರ ಬಂಧನದಿಂದ ತಲಘಟ್ಟಪುರ ಪೊಲೀಸ್ ಠಾಣೆಯ- 03 ದ್ವಿಚಕ್ರ ವಾಹನ ಕಳವು ಪ್ರಕರಣಗಳು, ಕೋಣನಕುಂಟೆ ಪೊಲೀಸ್ ಠಾಣೆಯ- 02 ದ್ವಿಚಕ್ರ ವಾಹನ ಕಳವು ಪ್ರಕರಣಗಳು, ಗಿರಿನಗರ, ಕಮಕರ್ಷಿಯಲ್ ಸ್ಟ್ರೀಟ್,ಬನಶಂಕರಿ, ತಿಲಕನಗರ, ಬಂಡೆಪಾಳ್ಯ, ರಾಜರಾಜೇಶ್ವರಿನಗರ, ಹನುಮಂತನಗರ, ಭಾರತಿನಗರ, ಸುಬ್ರಮಣ್ಯಪುರ, ಸಿದ್ದಾಪುರ ಪೊಲೀಸ್ ಠಾಣೆಗಳ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 10 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಹಾಗೂ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳ 05 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಸೇರಿದಂತೆ ಒಟ್ಟು 20 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.
ದಿನಾಂಕ:17/04/2026 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ನೈರುತ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ.ಅನಿತಾ.ಬಿ.ಹದ್ದಣ್ಣನವರ, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಸುಬ್ರಮಣ್ಯಪುರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಗಿರೀಶ್.ಎಸ್.ಬಿ ರವರ ನೇತೃತ್ವದಲ್ಲಿ, ತಲಘಟ್ಟಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಆರ್.ಎಸ್.ಚೌಧರಿ ಮತ್ತು ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣದ ಆರೋಪಿಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ : ಮುಬಾರಕ್
