ಆರ್‌ಸಿಬಿ ಗೆಲುವಿನ ಸಂಭ್ರಮಕ್ಕೆ ಪೊಲೀಸರ ‘ಬ್ರೇಕ್’: ಬೆಂಗಳೂರಿನಲ್ಲಿ ಕಠಿಣ ನಿಯಮಗಳು ಜಾರಿ!

ಬೆಂಗಳೂರು: ಟಾಟಾ ಐಪಿಎಲ್ 2026 (TATA IPL 2026) ಮಹಾಫೈನಲ್ ಪಂದ್ಯದ ಕ್ರಿಕೆಟ್ ಜ್ವರ ಇಡೀ ಸಿಲಿಕಾನ್ ಸಿಟಿಯನ್ನು ಆವರಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಪ್ರಶಸ್ತಿಗಾಗಿ ಕಣಕ್ಕಿಳಿಯುತ್ತಿದ್ದು, ಅಭಿಮಾನಿಗಳಲ್ಲಿ ರೋಮಾಂಚನ ಮುಗಿಲು ಮುಟ್ಟಿದೆ ಆದರೆ, ಅಕಸ್ಮಾತ್ ಈ ಬಾರಿ ಆರ್‌ಸಿಬಿ ಫೈನಲ್ ಗೆದ್ದರೆ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಬೆಂಗಳೂರು ನಗರ ಪೊಲೀಸ್ ಇಲಾಖೆ ಅತ್ಯಂತ ಕಠಿಣ ಸುರಕ್ಷತಾ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.

ಕಳೆದ ವರ್ಷ (2025) ಆರ್‌ಸಿಬಿ ಚಾಂಪಿಯನ್ ಆದಾಗ ಎಂ. ಚಿನ್ಯಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಜನರು ಪ್ರಾಣ ಕಳೆದುಕೊಂಡಿದ್ದರು. ಈ ಕಹಿ ಘಟನೆಯಿಂದ ಪಾಠ ಕಲಿತಿರುವ ಪೊಲೀಸರು, ಈ ಬಾರಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕವಾಗಿ ರಸ್ತೆಗಳಲ್ಲಿ ಸಂಭ್ರಮಿಸುವುದಕ್ಕೆ ಸಂಪೂರ್ಣ ‘ಬ್ರೇಕ್’ ಹಾಕಿದ್ದಾರೆ.

ಪೊಲೀಸರು ಜಾರಿ ಮಾಡಿರುವ ಪ್ರಮುಖ ರೂಲ್ಸ್ ಇಲ್ಲಿವೆ:

ರಸ್ತೆಗಳಲ್ಲಿ ಸಂಭ್ರಮಾಚರಣೆ ನಿಷೇಧ: ಪಂದ್ಯ ಮುಗಿದ ತಕ್ಷಣ ಸಾರ್ವಜನಿಕ ರಸ್ತೆಗಳು, ಫ್ಲೈಓವರ್‌ಗಳು ಅಥವಾ ಪ್ರಮುಖ ವೃತ್ತಗಳಲ್ಲಿ ಗುಂಪು ಕೂಡಿ ವಿಜಯೋತ್ಸವ ಆಚರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಬಿಗ್ ಸ್ಕ್ರೀನ್ ಲೈವ್ ಸ್ಕ್ರೀನಿಂಗ್ ಬ್ಯಾನ್: ಮಾಲ್‌ಗಳು, ಪಬ್‌ಗಳು, ರೆಸ್ಟೋರೆಂಟ್‌ಗಳು ಅಥವಾ ವಾಣಿಜ್ಯ ಸಂಸ್ಥೆಗಳ ಹೊರಗೆ ಸಾರ್ವಜನಿಕರು ರಸ್ತೆಯಲ್ಲಿ ನಿಂತು ನೋಡುವಂತೆ ದೊಡ್ಡ ಎಲ್‌ಇಡಿ (LED) ಪರದೆಗಳನ್ನು ಹಾಕಿ ಪಂದ್ಯ ಪ್ರಸಾರ ಮಾಡಲು ಅನುಮತಿ ಇಲ್ಲ.
ರೈಡರ್ಸ್‌ಗೆ ಎಚ್ಚರಿಕೆ (ನೋ ಬೈಕ್ ರ‍್ಯಾಲಿ): ತಡರಾತ್ರಿ ಬೈಕ್ ರ‍್ಯಾಲಿ ಮಾಡುವುದು, ವೀಲಿಂಗ್‌ನಂತಹ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುವುದು ಮತ್ತು ಅನಗತ್ಯವಾಗಿ ಹಾರ್ನ್ ಹಾಕಿ ಸಾರ್ವಜನಿಕರಿಗೆ ತೊಂದರೆ ಕೊಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಯಮ ಮೀರಿದರೆ ವಾಹನಗಳನ್ನು ಸೀಜ್ ಮಾಡಲಾಗುತ್ತದೆ.
ಪಟಾಕಿ ಸಿಡಿಸುವಂತಿಲ್ಲ: ಜನನಿಬಿಡ ಪ್ರದೇಶಗಳಲ್ಲಿ ಹಾಗೂ ರಸ್ತೆಗಳ ಮಧ್ಯೆ ಪಟಾಕಿ ಸಿಡಿಸಿ ಗದ್ದಲ ಎಬ್ಬಿಸುವುದಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.
ಸೋಷಿಯಲ್ media ಮೇಲೆ ಹದ್ದಿನ ಕಣ್ಣು: ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ತಂಡಗಳ ಅಭಿಮಾನಿಗಳನ್ನು ಕೆಣಕುವ, ನಿಂದಿಸುವ ಅಥವಾ ಸೌಹಾರ್ದತೆಗೆ ಧಕ್ಕೆ ತರುವಂತಹ ಪೋಸ್ಟ್‌ಗಳನ್ನು ಹಾಕಿದರೆ ಸೈಬರ್ ಕ್ರೈಮ್ ಅಡಿಯಲ್ಲಿ ಕೇಸ್ ದಾಖಲಾಗಿಸುತ್ತದೆ.

ಅಭಿಮಾನಿಗಳಿಗೆ ನಮ್ಮ ಮೆಟ್ರೋ ಕಡೆಯಿಂದ ಬಂಪರ್ ಕೊಡುಗೆ!
ಈ ಕಠಿಣ ನಿಯಮಗಳ ನಡುವೆ ರಸ್ತೆಯಲ್ಲಿ ಟ್ರಾಫಿಕ್ ಹಾಗೂ ಪಾರ್ಕಿಂಗ್ ಸಮಸ್ಯೆ ನಿಯಂತ್ರಿಸಲು ಬೆಂಗಳೂರು ಮೆಟ್ರೋ (Namma Metro) ಒಂದು ವಿಶೇಷ ಆಫರ್ ನೀಡಿದೆ. ConfirmTkt ಆ್ಯಪ್ ಮೂಲಕ ಬುಕ್ ಮಾಡುವ ಗ್ರಾಹಕರಿಗೆ ಭಾನುವಾರ 100 ರೂ. ಮೌಲ್ಯದ ಎರಡು ಮೆಟ್ರೋ ರೈಡ್‌ಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ.

ಪಂದ್ಯವನ್ನು ಮನೆಯಲ್ಲಿ ಅಥವಾ ಸುರಕ್ಷಿತವಾದ ಒಳಾಂಗಣ ಪ್ರದೇಶಗಳಲ್ಲಿ ನಿಮ್ಮ ಕುಟುಂಬದೊಂದಿಗೆ ವೀಕ್ಷಿಸಿ ಆನಂದಿಸಿ. ಜವಾಬ್ದಾರಿಯುತವಾಗಿ ನಡೆದುಕೊಂಡು ನಗರದ ಶಾಂತಿ ಕಾಪಾಡಲು ಸಹಕರಿಸಿ” ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಗರಾಜ್ (ಕೆ.ಕಲ್ಲಹಳ್ಳಿ)

error: Content is protected !!