ನಾಮದ ಚಿಲುಮೆಯಲ್ಲಿ ಪರಿಸರ ಪ್ರೇಮಿಗಳ ಮಹಾ ಅಭಿಯಾನ: ಕಾಡಿನ ಒಡಲಿಂದ ಹೊರಬಂತು 50 ಚೀಲ ಪ್ಲಾಸ್ಟಿಕ್ ತ್ಯಾಜ್ಯ!

ತುಮಕೂರು: ಪ್ರಕೃತಿಯ ಮಡಿಲು, ಪ್ರವಾಸಿಗರ ನೆಚ್ಚಿನ ತಾಣವಾದ ತುಮಕೂರಿನ ಐತಿಹಾಸಿಕ ‘ನಾಮದ ಚಿಲುಮೆ’ಯ ಪರಿಸರ ಸಂರಕ್ಷಣೆಗಾಗಿ ಇಂದು (ಮೇ 31) ಪರಿಸರ ಪ್ರೇಮಿಗಳು ಅಪೂರ್ವ ಹಸಿರು ಕ್ರಾಂತಿಯೊಂದಕ್ಕೆ ಸಾಕ್ಷಿಯಾಗಿದ್ದಾರೆ. ನಾಮದ ಚಿಲುಮೆಯ ಅರಣ್ಯ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಮತ್ತು ಬೇಸಿಗೆಯ ಈ ದಿನಗಳಲ್ಲಿ ವನ್ಯಜೀವಿಗಳ ದಾಹ ತೀರಿಸುವ ಉದಾತ್ತ ಉದ್ದೇಶದಿಂದ ‘ಸಮಾನ ಮನಸ್ಕರ ಒಕ್ಕೂಟ’ ಹಮ್ಮಿಕೊಂಡಿದ್ದ ‘ಜಲಸೇವೆ ಮತ್ತು ಪ್ಲಾಸ್ಟಿಕ್ ಮುಕ್ತ ಸ್ವಚ್ಛತಾ ಆಂದೋಲನ’ ಅಭೂತಪೂರ್ವ ಯಶಸ್ಸು ಕಂಡಿದೆ.

ಅರಣ್ಯ ಒಡಲಿನಿಂದ ಹೊರಬಂತು 50 ಚೀಲ ತ್ಯಾಜ್ಯ!
ಭಾನುವಾರ ಬೆಳಿಗ್ಗೆಯೇ ನಾಮದ ಚಿಲುಮೆಯಲ್ಲಿ ಜಮಾಯಿಸಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸ್ವಯಂಸೇವಕರು ಅರಣ್ಯ ಪ್ರದೇಶದ ಮೂಲೆ ಮೂಲೆಗಳನ್ನು ಜಾಲಾಡಿದರು. ಪ್ರವಾಸಿಗರು ಎಸೆದು ಹೋಗಿದ್ದ ಪ್ಲಾಸ್ಟಿಕ್ ಬಾಟಲಿಗಳು, ಕವರ್‌ಗಳು ಸೇರಿದಂತೆ ಸುಮಾರು 40 ರಿಂದ 50 ಚೀಲಗಳಷ್ಟು (ಅಂದಾಜು 30 ಕೆಜಿ) ಪ್ಲಾಸ್ಟಿಕ್ ತ್ಯಾಜ್ಯವನ್ನು ಹೆಕ್ಕಿ ತೆಗೆಯುವ ಮೂಲಕ ಕಾಡಿನ ಒಡಲನ್ನು ಸ್ವಚ್ಛಗೊಳಿಸಿದರು.

ಮೂಕಪ್ರಾಣಿಗಳಿಗೆ ಆಸರೆಯಾದ ‘ಜಲಸೇವೆ’:
ಕೇವಲ ಸ್ವಚ್ಛತೆಯಷ್ಟೇ ಅಲ್ಲದೆ, ಅರಣ್ಯದ ಪ್ರಾಣಿ-ಪಕ್ಷಿಗಳು ಕುಡಿಯುವ ನೀರಿಲ್ಲದೆ ತತ್ತರಿಸಬಾರದು ಎಂಬ ದೃಷ್ಟಿಯಿಂದ ಪರಿಸರವಾದಿಗಳು ಕಾಡಿನ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ವನ್ಯಜೀವಿಗಳಿಗಾಗಿ ಕುಡಿಯುವ ನೀರಿನ ಆಸರೆ ವ್ಯವಸ್ಥೆಯನ್ನು ಕಲ್ಪಿಸಿ ಮಾನವೀಯತೆ ಮೆರೆದರು. ಕಾರ್ಯಕ್ರಮದ ಕೊನೆಯಲ್ಲಿ ನವಿಲು ಫೌಂಡೇಶನ್‌ನ ಚಂದ್ರಶೇಖರ್ ಅವರು ಪರಿಸರ ಜಾಗೃತಿ ಮೂಡಿಸುವ ಗೀತೆಯನ್ನು ಹಾಡುವ ಮೂಲಕ ಆಂದೋಲನಕ್ಕೆ ಅರ್ಥಪೂರ್ಣ ಹಾಗೂ ಭಾವನಾತ್ಮಕ ಅಂತ್ಯ ಹಾಡಿದರು.

ನಾಯಕತ್ವ ವಹಿಸಿದ ಸಲೀಂ ಖಾನ್:
ಈ ಇಡೀ ಪರಿಸರ ಸ್ನೇಹಿ ಅಭಿಯಾನದ ಸಂಘಟನೆ, ಆಯೋಜನೆ ಹಾಗೂ ಯಶಸ್ವಿ ನೇತೃತ್ವವನ್ನು ತುಮಕೂರಿನ ಪ್ರಮುಖ ಸಾಮಾಜಿಕ ಕಾರ್ಯಕರ್ತರಾದ ಸಲೀಂ ಖಾನ್ ಅವರು ವಹಿಸಿದ್ದರು.
ಅಭಿಯಾನದಲ್ಲಿ ಹೆಗಲುಕೊಟ್ಟ ವಿವಿಧ ಸಂಸ್ಥೆಗಳು:
ಈ ಹೆಮ್ಮೆಯ ಕಾಡು ರಕ್ಷಣೆಯ ಕಾರ್ಯದಲ್ಲಿ ಜಿಲ್ಲೆಯ ವಿವಿಧ ಪ್ರತಿಷ್ಠಿತ ಸಂಘಟನೆಗಳ ಪ್ರಮುಖರು ಭಾಗವಹಿಸಿ ಶ್ರಮದಾನ ಮಾಡಿದರು
ಸಲೀಂ ಖಾನ್: (ಪ್ರಧಾನ ಕಾರ್ಯದರ್ಶಿ, ಭಾವೈಕ್ಯ ಯುವಜನ ಸಂಘ)
ಅರವಿಂದ್ ಹಾಗೂ ಸ್ವಯಂಸೇವಕರು (ಜಿಲ್ಲಾ ಸಂಯೋಜಕರು, ಯೂತ್ ಫಾರ್ ಸೇವಾ ತುಮಕೂರು ಚಾಪ್ಟರ್)
ಶಿವರಾಜ್ (ಜಿಲ್ಲಾ ಸಂಘಟಕರು, ಭಾರತ ಸೇವಾದಳ
ಚಂದ್ರಶೇಖರ್ (ನವಿಲು ಫೌಂಡೇಶನ್)
“ಅನುರಾಗ್ ಭೀಮ್ಸಂದ್ರ (ಅಭಿನವ ರಂಗ ಸಂಪನ್ಮೂಲ ಕೇಂದ್ರ)
ಶ್ರೀನಿವಾಸ್ (ಐಕ್ಯ ಫೌಂಡೇಶನ್)
ಲೋಕೇಶ್ (ಕಲಾಕಲ್ಪಂ ಸಂಸ್ಥೆ)
ವೆಂಕಟೇಶ್ (ಪ್ರೇರಣಾ ಡಿಸೇಬಲ್ಡ್ ವೆಲ್ಫೇರ್ ಟ್ರಸ್ಟ್.

ಇವರೊಂದಿಗೆ 20ಕ್ಕೂ ಹೆಚ್ಚು ಯುವ ಸ್ವಯಂಸೇವಕರು ಮತ್ತು ಪರಿಸರ ಕಾಳಜಿಯುಳ್ಳ ನಾಗರಿಕರು ಈ ಸ್ವಚ್ಛತಾ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ನಾಗರಾಜ್ (ಕೆ.ಕಲ್ಲಹಳ್ಳಿ)

error: Content is protected !!