ಡಿಕೆಶಿ ಸರ್ಕಾರಕ್ಕೆ ಮತ್ತೊಂದು ಬಿಗ್ ಶಾಕ್: ರಾಮಲಿಂಗಾರೆಡ್ಡಿ ಬೆನ್ನಲ್ಲೇ ಕೆ.ಹೆಚ್. ಮುನಿಯಪ್ಪ ರಾಜೀನಾಮೆ ಅಸ್ತ್ರ?

ಬೆಂಗಳೂರು: ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ಎರಡೇ ದಿನಗಳಲ್ಲಿ ಭಾರಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ.ಬೆಂಗಳೂರು ಅಭಿವೃದ್ಧಿ ಖಾತೆ ಸಿಗಲಿಲ್ಲ ಎಂಬ ಅಸಮಾಧಾನದಿಂದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಮತ್ತೊಬ್ಬ ಹಿರಿಯ ನಾಯಕ ಹಾಗೂ ಸಚಿವ ಕೆ.ಹೆಚ್. ಮುನಿಯಪ್ಪ ಕೂಡ ರಾಜೀನಾಮೆ ಅಸ್ತ್ರ ಉರುಳಿಸಲು ಸಜ್ಜಾಗಿದ್ದಾರೆ. ಇದು ಡಿಕೆಶಿ ಸರ್ಕಾರಕ್ಕೆ ಭಾರಿ ತಲೆನೋವಾಗಿ ಪರಿಣಮಿಸಿದೆ.

ಮುನಿಯಪ್ಪ ಮುನಿಸಿಗೆ ಕಾರಣವೇನು?
ನೂತನ ಸಂಪುಟದಲ್ಲಿ ಕೆ.ಹೆಚ್. ಮುನಿಯಪ್ಪ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ಹಂಚಿಕೆ ಮಾಡಲಾಗಿದೆ ಆದರೆ, ತಮಗಿರುವ ದಶಕಗಳ ರಾಜಕೀಯ ಅನುಭವ ಮತ್ತು ಹಿರಿತನಕ್ಕೆ ಈ ಖಾತೆ ತೀರಾ ಸಣ್ಣದು ಎಂಬುದು ಅವರ ತೀವ್ರ ಬೇಸರಕ್ಕೆ ಕಾರಣ. ಮೂಲಗಳ ಪ್ರಕಾರ, ಅವರು ಸಮಾಜ ಕಲ್ಯಾಣ ಅಥವಾ ಕೃಷಿ ಇಲಾಖೆಯ ದೊಡ್ಡ ಖಾತೆಯನ್ನು ನಿರೀಕ್ಷಿಸಿದ್ದರು. ತಮಗೆ ಸೂಕ್ತ ಗೌರವ ಸಿಕ್ಕಿಲ್ಲ ಎಂದು ಭಾವಿಸಿರುವ ಮುನಿಯಪ್ಪ, ಹೈಕಮಾಂಡ್ ನಡೆಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಪಕ್ಷದ ಶಿಸ್ತಿನ ಸಿಪಾಯಿಗೆ ಅನ್ಯಾಯ?
ಈ ಕುರಿತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, “ನಾನು ಯಾವಾಗಲೂ ಪಕ್ಷದ ಶಿಸ್ತಿನ ಸಿಪಾಯಿ, ಆದರೆ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ತಾರತಮ್ಯ ನಡೆದಿದೆ” ಎಂದು ಮುನಿಯಪ್ಪ ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ.ಒಂದು ವೇಳೆ ತಮಗೆ ನೀಡಿರುವ ಖಾತೆಯನ್ನು ಬದಲಾವಣೆ ಮಾಡದಿದ್ದರೆ, ಸಚಿವ ಸ್ಥಾನಕ್ಕೆ ಗುಡ್‌ಬೈ ಹೇಳುವುದು ಗ್ಯಾರಂಟಿ ಎಂಬ ಮುನ್ಸೂಚನೆ ನೀಡಿದ್ದಾರೆ.

ಡಿಕೆಶಿ ಸರ್ಕಾರಕ್ಕೆ ಎದುರಾಯ್ತು ದೊಡ್ಡ ಗಂಡಾಂತರ
ರಾಮಲಿಂಗಾರೆಡ್ಡಿ ರಾಜೀನಾಮೆಯಿಂದ ಈಗಾಗಲೇ ಕಂಗೆಟ್ಟಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಈಗ ಮುನಿಯಪ್ಪ ಅವರ ಬಂಡಾಯ ಮತ್ತೊಂದು ದೊಡ್ಡ ಆಘಾತ ನೀಡಿದೆ. ಒಂದೆಡೆ ವಿರೋಧ ಪಕ್ಷ ಬಿಜೆಪಿ “ಕಾಂಗ್ರೆಸ್‌ನ ಆಂತರಿಕ ಕಚ್ಚಾಟದಿಂದಾಗಿ ಆಡಳಿತ ಹಳಿ ತಪ್ಪುತ್ತಿದೆ” ಎಂದು ಲೇವಡಿ ಮಾಡುತ್ತಿದೆ. ಇನ್ನೊಂದೆಡೆ, ಅತೃಪ್ತ ಹಿರಿಯ ನಾಯಕರನ್ನು ಸಮಾಧಾನಪಡಿಸಲು ಸಿಎಂ ಡಿ.ಕೆ. ಶಿವಕುಮಾರ್ ಅವರು ತೀವ್ರ ಕಸರತ್ತು ನಡೆಸುತ್ತಿದ್ದಾರೆ.

ಹಿರಿಯ ನಾಯಕರು ತಮ್ಮ ಪಟ್ಟು ಸಡಿಲಿಸದಿದ್ದರೆ, ಡಿಕೆಶಿ ಸರ್ಕಾರದ ಎರಡನೇ ವಿಕೆಟ್ ಪತನವಾಗುವುದು ಖಚಿತ ಎನ್ನಲಾಗುತ್ತಿದ್ದು, ಕರ್ನಾಟಕ ರಾಜಕೀಯದ ಮುಂದಿನ ನಡೆ ತೀವ್ರ ಕುತೂಹಲ ಮೂಡಿಸಿದೆ.

ವರದಿ : ನಾಗರಾಜ್ (ಕೆ.ಕಲ್ಲಹಳ್ಳಿ)

error: Content is protected !!