ಮಹಿಳಾ ಪೊಲೀಸರಿಂದ ಕವಾಯಿತು ಪ್ರದರ್ಶನ
==================
ಬಸವಕಲ್ಯಾಣ: ತಾಲ್ಲೂಕಿನ ಯರಬಾಗನ ನೀಲಗಂಗಾ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಜುಲೈ 25ರಂದು ಅಕ್ಕಪಡೆಯ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ.
‘ನಾನೂ ಅಕ್ಕ ಪಡೆ, ಮಹಿಳೆಯರ ರಕ್ಷಣೆ ನಮ್ಮ ಆದ್ಯತೆ’ ಜಾಗೃತಿ ಕಾರ್ಯಕ್ರಮದ ಹೆಸರಿನಲ್ಲಿ ನಡೆಯುವ ಈ ಸಮಾರಂಭದಲ್ಲಿ ಅಕ್ಕ ಪಡೆಯ ಮಹಿಳಾ ಪೊಲೀಸರಿಂದ ವಿವಿಧ ರೀತಿಯ ಕವಾಯಿತು ಪ್ರದರ್ಶನ ನಡೆಯಲಿದೆ.
ಬೀದರ್ ಜಿಲ್ಲಾ ಪೊಲೀಸ್ ಹಾಗೂ ಕರ್ನಾಟಕ ರೂರಲ್ ಅಂಡ್ ಅರ್ಬನ್ ಡೆವಲಪ್ಮೆಂಟ್ ಸೊಸೈಟಿ (KRUDS) ಬೀದರ್ ಮತ್ತು ನೀಲಗಂಗಾ ಶಿಕ್ಷಣ ಸಂಸ್ಥೆ, ಬೆಂಗಳೂರು ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಶಂಕರಗೌಡ ಹಾಗೂ ಸೊಸೈಟಿ ಕಾರ್ಯದರ್ಶಿ ಶಿವು ಮಠಪತಿ ಜಂಟಿಯಾಗಿ ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳು, ಶಾಲಾ-ಕಾಲೇಜುಗಳು, ವಸತಿ ನಿಲಯಗಳು, ಮಾಲ್ಗಳು, ಚಿತ್ರಮಂದಿರಗಳು, ಜಾತ್ರೆಗಳು ಹಾಗೂ ಸಮಾವೇಶಗಳ ಸ್ಥಳಗಳಲ್ಲಿ ಪುಂಡಪೋಕರಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಕ್ಕ ಪಡೆ ಗಸ್ತು ತಿರುಗಲಿದ್ದು, ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಅಥವಾ ಕಿರುಕುಳ ನಡೆದರೆ ತಕ್ಷಣ ನೆರವಿಗೆ ಧಾವಿಸಲಿದೆ ಎಂದು ಅವರು ಹೇಳಿದರು.
ಸಂಪರ್ಕಕ್ಕಾಗಿ ಸಹಾಯವಾಣಿ ಸಂಖ್ಯೆಯನ್ನೂ ನೀಡಲಾಗಿದೆ. ಅಕ್ಕ ಪಡೆಯ ಕರ್ತವ್ಯಗಳು ಮತ್ತು ಕಾರ್ಯಚಟುವಟಿಕೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಈ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾವಿರಾರು ಮಹಿಳೆಯರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಜುಲೈ 25ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಅಕ್ಕ ಪಡೆಯ ರಾಜ್ಯ ಸಂಯೋಜಕಿ ಶೈನಿ ಪ್ರದೀಪ್ ಗುಂಟಿ ಉದ್ಘಾಟಿಸಲಿದ್ದಾರೆ. ತ್ರಿಪುರಾಂತ ಅಭಿನವ ಫನಲಿಂಗ ರುದ್ರಮುನಿ ಶಿವಾಚಾರ್ಯರು ನೇತೃತ್ವ ವಹಿಸಲಿದ್ದಾರೆ.
ನೀಲಗಂಗಾ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷೆ ಡಾ. ಅನಿತಾ ಮಹಾಜನ್ ಅಧ್ಯಕ್ಷತೆ ವಹಿಸಲಿದ್ದು, ತಹಶೀಲ್ದಾರ್ ದತ್ತಾತ್ರೇಯ ಜೆ. ಗಾದಾ, ಇಒ ರಮೇಶ್ ಸುಲ್ಫಿ, ಸಿಡಿಪಿಒ ಶಿವಪ್ರಕಾಶ ಹೀರೆಮಠ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಕೀಲೆ ವಿಜಯಲಕ್ಷ್ಮಿ ಆರ್. ಹೂಗಾರ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ಅವರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವೂ ಏರ್ಪಡಿಸಲಾಗಿದೆ. ನೀಲಗಂಗಾ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವೈದ್ಯರು ತಪಾಸಣೆ ನಡೆಸಲಿದ್ದು, ಅಗತ್ಯವಿರುವವರಿಗೆ ಔಷಧ ವಿತರಿಸಲಾಗುತ್ತದೆ.
ಜಾನಪದ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಕಾರ್ಯಕ್ರಮ ಹಾಗೂ ಶಿಬಿರಕ್ಕೆ ಆಗಮಿಸುವವರಿಗಾಗಿ ಖಾಸಗಿ ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಬಾಲ ಚಿತ್ರನಟಿ, ರಾಷ್ಟ್ರೀಯ ರೈಫಲ್ ಶೂಟರ್ ಲಕ್ಷ್ಮೀ ಭಟ್ ಹಾಗೂ ಗಾಯಕಿ ಶಿವಾನಿ ಶಿವದಾಸ ಸ್ವಾಮಿ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
