ನಾಗೂರ್ ಗ್ರಾಮದಲ್ಲಿ ಬಿಎಲ್ಓ, ಕಂದಾಯ ಅಧಿಕಾರಿಗಳಿಗೆ ಸನ್ಮಾನ

_ಕಮಲಾಪುರ್ ತಾಲೂಕು, ನಾಗೂರ್: ಆಗಸ್ಟ್ 8_

ಕಮಲಾಪುರ್ ತಾಲೂಕಿನ ನಾಗೂರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್) ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಕಾರ್ಯದಲ್ಲಿ ಶ್ರಮಿಸಿದ ಬಿಎಲ್ಓ ಮತ್ತು ಕಂದಾಯ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಗ್ರಾಮ ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ಈ ಸನ್ಮಾನ ಕಾರ್ಯಕ್ರಮದಲ್ಲಿ ಎಸ್.ಐ.ಆರ್ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಿದ ಅಧಿಕಾರಿಗಳ ಸೇವೆಯನ್ನು ಸಾರ್ವಜನಿಕವಾಗಿ ಶ್ಲಾಘಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಶುಭಾಶ್ ಗುತ್ತೇದಾರ್, ಶರಣು ನಿಂಗಶೆಟ್ಟಿ, ಶರಣು, ಗ್ರಾಮ ಪಂಚಾಯತ್ ಪಿಡಿಓ ವಹೀದ್ ಅಲಿ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ್ ಸೇರಿದಂತೆ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.

ಮಾತನಾಡಿದ ಗ್ರಾಮದ ಮುಖಂಡರು, ಮತದಾರರ ಪಟ್ಟಿ ನವೀಕರಣವು ಪ್ರಜಾಪ್ರಭುತ್ವದ ಅಡಿಪಾಯವಾಗಿದ್ದು, ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ ಬಿಎಲ್ಓ ಮತ್ತು ಕಂದಾಯ ಸಿಬ್ಬಂದಿಯ ಶ್ರಮ ಶ್ಲಾಘನೀಯ ಎಂದು ಹೇಳಿದರು. ಮುಂದೆಯೂ ಇಂತಹ ಕಾರ್ಯಗಳಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಅವರು ತಿಳಿಸಿದರು.

ಸನ್ಮಾನ ಸ್ವೀಕರಿಸಿದ ಅಧಿಕಾರಿಗಳು, ಗ್ರಾಮಸ್ಥರ ಸಹಕಾರದಿಂದಲೇ ಕಾರ್ಯವು ಯಶಸ್ವಿಯಾಗಿ ಮುಗಿದಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಎಲ್ಲ ಅಧಿಕಾರಿಗಳಿಗೆ ಸ್ಮರಣಿಕೆ ಮತ್ತು ಶಾಲು ಹೊದಿಸಿ ಸನ್ಮಾನಿಸಲಾಯಿತು.

ವರದಿ : ರಮೇಶ್ ಎಸ್ ಕುಡಹಳ್ಳಿ

error: Content is protected !!