ಸಂಸದ ರಮೇಶ ಜಿಗಜಿಣಗಿ ವಾಗ್ದಾಳಿ ಕೈ ನಾಯಕರ ನಡೆಗೆ ತೀವ್ರ ಖಂಡನೆ

ವಿಜಯಪುರ: ಕಾಂಗ್ರೆಸ್‌ ಪಕ್ಷದ ಕೇಂದ್ರ ಕಚೇರಿ ಇಂದಿರಾ ಭವನದಲ್ಲಿ “ವಂದೇ ಮಾತರಂ” ಮೊಳಗುತ್ತಿರಬೇಕಾದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ಇಂದಿರಾಗಾಂಧಿ ನಡೆದುಕೊಂಡ ರೀತಿ ಖಂಡನೀಯ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ್ದ, ಕ್ರಾಂತಿಕಾರಿಗಳಿಗೆ ಪ್ರೇರಣಾದಾಯಿಯಾಗಿದ್ದ “ವಂದೇಮಾತರಂ”ಗೆ ಅವಮಾನಿಸುವುದು ಕಾಂಗ್ರೆಸ್‌ಗೆ ಹೊಸದೇನಲ್ಲ, ಸ್ವಾತಂತ್ರ್ಯೋತ್ತರ ಕಾಲದಿಂದಲೂ ವಂದೇ ಮಾತರಂಗೆ ವಿರೋಧ ಮಾಡುತ್ತಲೇ ಬಂದಿರುವ ಕಾಂಗ್ರೆಸ್‌ ಸಂಸತ್‌ನಲ್ಲಿಯೂ “ವಂದೇ ಮಾತರಂ ಮಸೂದೆ”ಗೆ ವಿರೋಧ ವ್ಯಕ್ತಪಡಿಸಿತ್ತು. ಮುಂದುವರಿದ ಭಾಗವಾಗಿ ಕಾಂಗ್ರೆಸ್‌ ಕೇಂದ್ರ ಕಚೇರಿ ಇಂದಿರಾಭವನದಲ್ಲಿ ಸ್ವಾತಂತ್ರ್ಯ ದಿನದಂದು ರಾಷ್ಟ್ರೀಯ ಗೀತಯಾಗಿರುವ ವಂದೇ ಮಾತರಂ ಮೊಳಗುತ್ತಿರಬೇಕಾದರೆ ಅಸಭ್ಯ ಹಾಗೂ ಅಗೌರವದಿಂದ ವರ್ತಿಸಿರುವುದು ಸಂವಿಧಾನ ವಿರೋಧಿ, ದೇಶವಿರೋಧಿ ನಡೆ ಎಂದು ಟೀಕಿಸಿದ್ದಾರೆ.
ವಂದೇ ಮಾತರಂ ಕುರಿತು ಕಾಂಗ್ರೆಸ್‌ಗೆ ಯಾವಾಗಲೂ ಅಸಹನೀಯವೇ. 1923ರಲ್ಲಿ ಕಾಕಿನಾಡ ಕಾಂಗ್ರೆಸ್ ಅಧಿವೇಶನದಲ್ಲಿ ಪಂಡಿತ ವಿಷ್ಣು ದಿಗಂಬರ ಪಲುಸ್ಕರ್ ಹಾಡಲು ಎದ್ದು ನಿಂತಾಗ, ಇಸ್ಲಾಂ ಪ್ರಕಾರ ಹಾಡುವುದು ನಿಷಿದ್ಧ ಎಂದು ಕೆಲ ಮುಸ್ಲಿಂ ಮುಖಂಡರು ವಿರೋಧಿಸಿದರು. ಆಗ ಪಲುಸ್ಕರ್, ಇದು ರಾಷ್ಟ್ರೀಯ ಸಭೆ, ಕೋಮಿನ ಸಭೆಯಲ್ಲ ಎಂದು ದಿಟ್ಟತನದಿಂದ ಹಾಡಿದ್ದರು. ಆಗಲೂ ಕಾಂಗ್ರೆಸ್‌ ಮುಸ್ಲಿಂ ನಾಯಕರ ಓಲೈಕೆಯಲ್ಲೇ ತೊಡಗಿತ್ತು. ಈಗಲೂ ಅದೇ ಪುನರಾವರ್ತನೆಯಾಗಿದೆ ಎಂದಿದ್ದಾರೆ.
ಮಾತೆತ್ತಿದರೆ ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್‌ಗೆ ಸಂವಿಧಾನ ಬದ್ಧವಾಗಿ ಸಂಸತ್‌ನಲ್ಲಿ ಅಂಗೀಕಾರಗೊಂಡು ಮಂಡನೆಯಾಗಿರುವ ವಂದೇ ಮಾತರಂ ಮಸೂದೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲವೇಕೆ? ವಂದೇ ಮಾತರಂ ಮೊಳಗುತ್ತಿರಬೇಕಾದ ಅಗೌರವವಾಗಿ ನಡೆದುಕೊಂಡಿದ್ದು ಸಂವಿಧಾನ ವಿರೋಧಿಯಲ್ಲವೇ? ಎಂದು ಕಿಡಿಕಾರಿದ್ದಾರೆ.

ಅಂದು ತೋಡೋ ಇಂದು ಜೋಡೊ:
1947ರ ಭಾರತ ವಿಭಜನೆಯಲ್ಲಿ ಕಾಂಗ್ರೆಸ್‌ ಪಾತ್ರವೂ ಇದೆ. ಆರಂಭದಲ್ಲಿ ಗಾಂಧೀಜಿ, ನೆಹರೂ ಮತ್ತು ಪಟೇಲ್ ಮುಂತಾದ ಹಿರಿಯ ನಾಯಕರು ಅಖಂಡ ಭಾರತದ ಪರವಾಗಿದ್ದರೂ, ಮುಸ್ಲಿಂ ಲೀಗ್‌ನ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯಂತೆ ವಿಭಜನೆಯನ್ನು ಒಪ್ಪಿಕೊಂಡರು. ಅಂದು “ಭಾರತ ತೋಡೊ”ಗೆ ಸಹಕರಿಸಿದ ಕಾಂಗ್ರೆಸ್‌ ಇಂದು “ಭಾರತ ಜೋಡೊ” ನಡೆಸುತ್ತಿರುವುದು ಪಶ್ಚಾತಪದ ಫಲ ಎನ್ನಿಸುತ್ತದೆ. ರಾಜ್ಯ ಕಾಂಗ್ರೆಸ್‌ ಸರ್ಕಾರ 10 ಸಾವಿರ ಭಾರತ್‌ ಜೋಡೋ ಯುವ ಸಂಘಟನೆಗಳನ್ನು ಸ್ಥಾಪಿಸುವುದಾಗಿಯೂ ಪ್ರತಿ ಸಂಘಕ್ಕೆ ೧೦ ಲಕ್ಷದಂತೆ ವಾರ್ಷಿಕ 1000 ಕೋಟಿ ರೂ. ಅನುದಾನ ಒದಗಿಸುವುದಾಗಿ ಹೇಳಿಕೊಂಡಿದೆ. ಇನ್ನೊಂದೆಡೆ ಜಾತಿ ಮತ್ತು ಧರ್ಮ ವಿಭಜನೆಗಳಲ್ಲಿ ತಲ್ಲೀನವಾಗಿದೆ. ಕೇವಲ ಅಧಿಕಾರಕ್ಕಾಗಿ, ಒಂದು ವರ್ಗದ ಓಲೈಕೆಗಾಗಿ ಕಾಂಗ್ರೆಸ್‌ ಇಂಥ ನಿರ್ಧಾರ ಕೈಗೊಳ್ಳುತ್ತಿದೆ ಎಂದು. ದೇಶಾದ್ಯಂತ ಸೋಲು ಕಂಡರೂ ಕಾಂಗ್ರೆಸ್‌ಗೆ ಇನ್ನೂ ಬುದ್ದಿ ಬಂದಿಲ್ಲ. ಇದೇ ರೀತಿ ವರ್ತನೆ ಮುಂದುವರಿದರೆ ಕರ್ನಾಟಕದಿಂದಲೂ ಜನ ಓಡಿಸುವ ದಿನಗಳು ದೂರವಿಲ್ಲ ಎಂದು ಜಿಗಜಿಣಗಿ ಪ್ರಕಟಣೆ ಮೂಲಕ ಹರಿಹಾಯ್ದಿದ್ದಾರೆ.

ವರದಿ : ಅಜೀಜ ಪಠಾಣ.

error: Content is protected !!