ಹಣ ವಾಪಸ್ ಕೇಳಲು ಬಂದವರ ಮೇಲೆ ಹಲ್ಲೆ: ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
ಹುಕ್ಕೇರಿ : ಮಿಲಿಟರಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ವಿದ್ಯಾರ್ಥಿಗಳ ಕುಟುಂಬಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಕಡಹಟ್ಟಿ ಗ್ರಾಮದ ರಮೇಶ ಮಾರುತಿ ನಾಯಕ ಎಂಬಾತನನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ಬೆಳಿಗ್ಗೆ ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿ ವ್ಯಾಪ್ತಿಯಲ್ಲಿ ನಡೆದಿದೆ.
ರಮೇಶ ನಾಯಕ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದಾನೆಂದು ಹೇಳಿಕೊಂಡು ವಿದ್ಯಾರ್ಥಿಗಳಿಗೆ ಮಿಲಿಟರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಸುಮಾರು ₹8ರಿಂದ ₹10 ಲಕ್ಷದವರೆಗೆ ಹಣ ಪಡೆದಿದ್ದಾನೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.
ಹಣವನ್ನು ಮರಳಿ ಕೇಳಲು ಬಂದ ವಿದ್ಯಾರ್ಥಿಗಳ ತಂದೆ-ತಾಯಿಯೊಂದಿಗೆ ರಮೇಶ ನಾಯಕ ಗಲಾಟೆ ನಡೆಸಿ ಹಲ್ಲೆ ಮಾಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಹಣದ ಬಗ್ಗೆ ಪ್ರಶ್ನಿಸಿದಾಗ, “ನಾನು ಯಾವುದೇ ಹಣ ಪಡೆದಿಲ್ಲ” ಎಂದು ಹೇಳಿ ಉಡಾಫೆಯಾಗಿ ವರ್ತಿಸಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ರಮೇಶ ನಾಯಕನನ್ನು ಹಿಡಿದು, ಮಾಜಿ ಚಿಕ್ಕೋಡಿ ಲೋಕಸಭಾ ಸಂಸದ ರಮೇಶ ವಿಶ್ವನಾಥ ಕತ್ತಿ ಅವರ ಕಚೇರಿಗೆ ಕರೆದುಕೊಂಡು ಹೋಗಿ, ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಈ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಹಣ ವಂಚನೆ ಹಾಗೂ ಹಲ್ಲೆ ಆರೋಪಗಳ ಬಗ್ಗೆ ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದುಬರಬೇಕಿದೆ.
